
ಟಿ20 ಕ್ರಿಕೆಟ್ನ ಪಾದಾರ್ಪಣೆ ಪಂದ್ಯದಲ್ಲೇ ಐರ್ಲೆಂಡ್ ವೇಗಿ ಲಿಯಾಮ್ ಮೆಕ್ಕಾರ್ಥಿ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ಇದು ಅನಗತ್ಯ ದಾಖಲೆ ಎಂಬುದು ವಿಶೇಷ. ಅಂದರೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಮೆಕ್ಕಾರ್ಥಿ ಚೊಚ್ಚಲ ಪಂದ್ಯದಲ್ಲೇ ದುಬಾರಿ ಓವರ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ನಾಲ್ಕು ಓವರ್ಗಳನ್ನು ಎಸೆದಿದ್ದ ಲಿಯಾಮ್ ಮೆಕ್ಕಾರ್ಥಿ 4 ಸಿಕ್ಸರ್ ಹಾಗೂ 11 ಫೋರ್ಗಳನ್ನು ಚಚ್ಚಿಸಿಕೊಂಡಿದ್ದಾರೆ. ಅಲ್ಲದೆ 24 ಎಸೆತಗಳಲ್ಲಿ ಬರೋಬ್ಬರಿ 81 ರನ್ ನೀಡಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಬೇಡದ ದಾಖಲೆಗೆ ಕೊರೊಳೊಡ್ಡಿದರು.

ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಇಂಗ್ಲೆಂಡ್ನ ಮಾಜಿ ವೇಗಿ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿತ್ತು. 2007 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟಿ20 ಪಂದ್ಯವಾಡಿದ್ದ ಅ್ಯಂಡರ್ಸನ್ 4 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 64 ರನ್ಗಳು. ಈ ಮೂಲಕ ಮೊದಲ ಪಂದ್ಯದಲ್ಲೇ ದುಬಾರಿ ಓವರ್ಗಳನ್ನು ಎಸೆದ ಅಪಕೀರ್ತಿಗೆ ಪಾತ್ರರಾಗಿದ್ದರು.

ಇದೀಗ ವೆಸ್ಟ್ ಇಂಡೀಸ್ ವಿರುದ್ಧ 4 ಓವರ್ಗಳಲ್ಲಿ 81 ರನ್ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಲಿಯಾಮ್ ಮೆಕ್ಕಾರ್ಥಿ ಅ್ಯಂಡರ್ಸನ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಇದಾಗ್ಯೂ ಇದು ಟಿ20 ಕ್ರಿಕೆಟ್ನ ಅತ್ಯಂತ ದುಬಾರಿ ಸ್ಪೆಲ್ ಅಲ್ಲ ಎಂಬುದು ವಿಶೇಷ. ಈ ಅನಗತ್ಯ ದಾಖಲೆ ಇರುವುದು ಮೂಸಾ ಜೋಬರ್ತೆ ಹೆಸರಿನಲ್ಲಿ.

2024 ರಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಗ್ಯಾಂಬಿಯಾದ ಮೂಸಾ ಜೋಬರ್ತೆ 4 ಓವರ್ಗಳಲ್ಲಿ ಬರೋಬ್ಬರಿ 93 ರನ್ ನೀಡಿದ್ದರು. ಇದು ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ದುಬಾರಿ ಸ್ಪೆಲ್. ಇದೀಗ 4 ಓವರ್ಗಳಲ್ಲಿ 81 ರನ್ ನೀಡಿರುವ ಲಿಯಾಮ್ ಮೆಕ್ಕಾರ್ಥಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.