
ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ (Mitchell Marsh) ಭರ್ಜರಿ ಶತಕ ಸಿಡಿಸಿದ್ದಾರೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿದ್ದರು.

157 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು 134 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ಒಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ಮಾರ್ಷ್ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿ 50 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅಲ್ಲದೆ 52 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 103 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ಟರು.

ಈ ಶತಕದೊಂದಿಗೆ ಮಿಚೆಲ್ ಮಾರ್ಷ್ ನ್ಯೂಝಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಸೆಂಚುರಿ ಸಿಡಿಸಿದ ಆಸ್ಟ್ರೇಲಿಯಾದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ 98 ರನ್ ಬಾರಿಸಿರುವುದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಅಜೇಯ 103 ರನ್ ಬಾರಿಸಿ ಮಿಚೆಲ್ ಮಾರ್ಷ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ಟಿ20 ರನ್ ಚೇಸಿಂಗ್ ವೇಳೆ ಶತಕ ಬಾರಿಸಿದ ವಿಶ್ವದ 2ನೇ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಸಹ ಮಿಚೆಲ್ ಮಾರ್ಷ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಬಾಬರ್ ಆಝಂ ಮಾತ್ರ ಈ ದಾಖಲೆ ಬರೆದಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ ಮಿಚೆಲ್ ಮಾರ್ಷ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.