
ಟಿ20 ವಿಶ್ವಕಪ್ 2026 ಕ್ಕಾಗಿ ಆಸ್ಟ್ರೇಲಿಯಾ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಹಲವು ಪ್ರಯೋಗ ನಡೆಸಿದ್ದ ಆಸ್ಟ್ರೇಲಿಯಾ ಇದೀಗ ಮುಂಬರುವ ವಿಶ್ವಕಪ್ಗಾಗಿ ಆರಂಭಿಕ ಜೋಡಿಯನ್ನು ಫಿಕ್ಸ್ ಮಾಡಿಕೊಂಡಿದೆ. ಅದರಂತೆ ಮುಂದಿನ ವಿಶ್ವಕಪ್ನಲ್ಲಿ ಆಸೀಸ್ ಪಡೆ ಎಡ-ಬಲಗೈ ದಾಂಡಿಗರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

2024 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಇನಿಂಗ್ಸ್ ಆರಂಭಿಸಿದ್ದರು. ಇದೀಗ ವಾರ್ನರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಮುಂಬರುವ ವಿಶ್ವಕಪ್ನಲ್ಲಿ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಖುದ್ದು ಮಿಚೆಲ್ ಮಾರ್ಷ್ ಉತ್ತರ ನೀಡಿದ್ದಾರೆ.

ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್, ಮುಂದಿನ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪರ ನಾನು ಹಾಗೂ ಟ್ರಾವಿಡ್ ಹೆಡ್ ಇನಿಂಗ್ಸ್ ಆರಂಭಿಸುವುದು ಖಚಿತ ಎಂದಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಪ್ರಯೋಗ ನಡೆಸಲಾಗಿತ್ತು. ಇದಕ್ಕೂ ಮುನ್ನ ಜೇಕ್ ಪ್ರೇಸರ್ ಮೆಕ್ಗುರ್ಕ್ಗೂ ಹಲವು ಅವಕಾಶಗಳನ್ನು ನೀಡಿದ್ದರು. ಆದರೆ ಈ ಪ್ರಯೋಗಗಳು ಫಲ ನೀಡಿಲ್ಲ.

ಹೀಗಾಗಿ ಅನುಭವಿ ದಾಂಡಿಗರಾದ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಅವರನ್ನೇ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಅತ್ತ ಮಾರ್ಷ್ ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದು 13 ಪಂದ್ಯಗಳಿಂದ 627 ರನ್ ಬಾರಿಸಿದ್ದರು. ಹೀಗಾಗಿ ಹೆಡ್ ಜೊತೆ ಮಾರ್ಷ್ರನ್ನು ಓಪನರ್ ಆಗಿ ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಲಾಗಿದೆ.

ಅದರಂತೆ ಆಗಸ್ಟ್ 10 ರಿಂದ ಶುರುವಾಗಲಿರುವ ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಮೂಲಕ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್ಗೆ ಭರ್ಜರಿ ಸಿದ್ಧತೆಗಳನ್ನು ನಡೆಸಲು ಆಸ್ಟ್ರೇಲಿಯಾ ತಂಡ ಮುಂದಾಗಿದೆ.