
ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ (Mitchell Owen) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಜಮೈಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಓವನ್ 27 ಎಸೆತಗಳಲ್ಲಿ 6 ಸಿಕ್ಸರ್ಗಳೊಂದಿಗೆ 50 ರನ್ ಬಾರಿಸಿ ಮಿಂಚಿದ್ದರು.

ಈ ಅರ್ಧಶತಕದೊಂದಿಗೆ ಮಿಚೆಲ್ ಓವನ್ ಟಿ20 ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ. ಈ ಸಾವಿರ ರನ್ ಪೂರೈಸಿರುವುದು 186.34 ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕನಿಷ್ಠ ಅತ್ಯಧಿಕ ಸ್ಟ್ರೈಕ್ ರೇಟ್ನಲ್ಲಿ ಒಂದು ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಮಿಚೆಲ್ ಓವನ್ ಪಾಲಾಯಿತು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ನ್ಯೂಝಿಲೆಂಡ್ನ ಫಿನ್ ಅಲೆನ್ ಹೆಸರಿನಲ್ಲಿತ್ತು. ಅಲೆನ್ ಟಿ20 ಕ್ರಿಕೆಟ್ನಲ್ಲಿ 159 ಇನಿಂಗ್ಸ್ಗಳ ಮೂಲಕ 4415 ರನ್ ಕಲೆಹಾಕಿದ್ದಾರೆ. ಅದು ಸಹ 173.81 ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮಿಚೆಲ್ ಓವನ್ ಮುರಿದಿದ್ದಾರೆ. ಮಿಚೆಲ್ ಕೇವಲ 44 ಟಿ20 ಇನಿಂಗ್ಸ್ಗಳ ಮೂಲಕ 1010 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರು ಬ್ಯಾಟ್ ಬೀಸಿರುವುದು 186.34 ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಸಾವಿರಕ್ಕೂ ಅಧಿಕ ರನ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಓವನ್ ಅಗ್ರಸ್ಥಾನಕ್ಕೇರಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಮಿಚೆಲ್ ಓವನ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ ಬಾರಿಸಿರುವ ಸಿಕ್ಸರ್ಗಳ ಸಂಖ್ಯೆ. ಕೇವಲ 44 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 77 ಸಿಕ್ಸ್ ಸಿಡಿಸಿದ್ದಾರೆ. ಕೇವಲ 23 ವರ್ಷದ ಮಿಚೆಲ್ ಓವನ್ ಇದೇ ಅಬ್ಬರ ಮುಂದುವರೆಸಿದರೆ ಟಿ20 ಕ್ರಿಕೆಟ್ನ ಸಿಕ್ಸರ್ ಕಿಂಗ್ ಎನಿಸುವುದರಲ್ಲಿ ಡೌಟೇ ಇಲ್ಲ.