ಬರೋಬ್ಬರಿ 13 ಸಿಕ್ಸ್: ಟಿ10 ಪಂದ್ಯದಲ್ಲಿ ತೂಫಾನ್ ಸೆಂಚುರಿ ಸಿಡಿಸಿದ ಜೋಶ್
Josh Brown Century: 2024ರ ಬಿಗ್ ಬ್ಯಾಷ್ ಲೀಗ್ನಲ್ಲಿ ಕೇವಲ 41 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ್ದ ಜೋಶ್ ಬ್ರೌನ್ ಇದೀಗ ಕೆರಿಬಿಯನ್ ಅಂಗಳದಲ್ಲೂ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಕೇವಲ 32 ಎಸೆತಗಳಲ್ಲಿ. ಅಂದರೆ 60 ಎಸೆತಗಳ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೋಶ್ ಬಿರುಸಿನ ಬ್ಯಾಟಿಂಗ್ನೊಂದಿಗೆ ಮೂರಂಕಿ ರನ್ ಕಲೆಹಾಕಿದ್ದಾರೆ.
Updated on:Jul 21, 2025 | 11:00 AM

ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಜೋಶ್ ಬ್ರೌನ್ ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಕೂಡ ಟಿ10 ಲೀಗ್ನಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದೇ ಅಚ್ಚರಿ. ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಮ್ಯಾಕ್ಸ್60 ಟಿ10 ಲೀಗ್ನ 11ನೇ ಪಂದ್ಯದಲ್ಲಿ ಜೋಶ್ ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಕೆರಿಬಿಯನ್ ಟೈಗರ್ಸ್ ಹಾಗೂ ಗ್ರ್ಯಾಂಡ್ ಕೇಮನ್ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆರಿಬಿಯನ್ ಟೈಗರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಜೋಶ್ ಬ್ರೌನ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಸಿಡಿಲಬ್ಬರ ಶುರು ಮಾಡಿದ ಬ್ರೌನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದರು.

ಭರ್ಜರಿ ಸೆಂಚುರಿ ಪೂರೈಸಿದ ಬಳಿಕ ಮೂರು ಎಸೆತಗಳನ್ನು ಎದುರಿಸಿದ ಜೋಶ್ ಬ್ರೌನ್ ಮತ್ತೆರಡು ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 35 ಎಸೆತಗಳಲ್ಲಿ 13 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 115 ರನ್ ಚಚ್ಚಿದರು. ಈ ಶತಕದ ನೆರವಿನೊಂದಿಗೆ ಕೆರಿಬಿಯನ್ ಟೈಗರ್ಸ್ ತಂಡವು 10 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

60 ಎಸೆತಗಳಲ್ಲಿ 148 ರನ್ಗಳ ಗುರಿ ಪಡೆದ ಗ್ರ್ಯಾಂಡ್ ಕೇಮನ್ ಫಾಲ್ಕನ್ಸ್ ತಂಡವು 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 58 ರನ್ಗಳು ಮಾತ್ರ. ಈ ಮೂಲಕ ಕೆರಿಬಿಯನ್ ಟೈಗರ್ಸ್ ತಂಡವು 88 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಜೋಶ್ ಬ್ರೌನ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಅಂದಹಾಗೆ ಜೋಶ್ ಬ್ರೌನ್ ಈ ಹಿಂದೆ ಬಿಗ್ ಬ್ಯಾಷ್ ಲೀಗ್ನಲ್ಲಿ 41 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ವೇಳೆ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸ್ಗಳ ಸಂಖ್ಯೆ 12. ಅಷ್ಟೇ ಅಲ್ಲದೆ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಜೋಶ್ ಬ್ರೌನ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಟಿ10 ಲೀಗ್ನಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಬ್ರೌನ್ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ಆಸೀಸ್ ದಾಂಡಿಗ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 10:55 am, Mon, 21 July 25
