
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಸ್ಫೋಟಕ ಯುವ ದಾಂಡಿಗ ಮಿಚೆಲ್ ಓವನ್ (Mitchell Owen). ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಆರಂಭಿಕ ದಾಂಡಿಗ ಶಾಯ್ ಹೋಪ್ 39 ಎಸೆತಗಳಲ್ಲಿ 55 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಸ್ಟನ್ ಚೇಸ್ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 60 ರನ್ ಚಚ್ಚಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿತು.

190 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಮಿಚೆಲ್ ಮಾರ್ಷ್ 17 ಎಸೆತಗಳಲ್ಲಿ 24 ರನ್ಗಳಿಸಿ ಔಟಾದರೆ, ಜೇಕ್ ಪ್ರೇಸರ್ ಮೆಕ್ಗುರ್ಕ್ ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ 18 ರನ್ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ (11) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಕ್ಯಾಮರೋನ್ ಗ್ರೀನ್ ಹಾಗೂ ಮಿಚೆಲ್ ಓವನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಗ್ರೀನ್ ಅಬ್ಬರಿಸಲಾರಂಭಿಸಿದರೆ, ಮತ್ತೊಂದೆಡೆ ಓವನ್ ತನ್ನ ಸ್ಫೋಟಕ ಬ್ಯಾಟಿಂಗ್ನ ಝಲಕ್ ತೋರಿಸಿದರು. ಈ ಮೂಲಕ ಕ್ಯಾಮರೋನ್ ಗ್ರೀನ್ 26 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ತನ್ನ ಆರ್ಭಟ ಮುಂದುವರೆಸಿದ ಮಿಚೆಲ್ ಓವನ್ 6 ಭರ್ಜರಿ ಸಿಕ್ಸ್ಗಳೊಂದಿಗೆ 27 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಈ ಮೂಲಕ 18.5 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಗುರಿ ಮುಟ್ಟಿಸುವಲ್ಲಿ ಓವನ್ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಈ ಸ್ಫೋಟಕ ಅರ್ಧಶತಕದೊಂದಿಗೆ ಚೊಚ್ಚಲ ಟಿ20 ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಪಡೆದರು. ಅಂದಹಾಗೆ 23 ವರ್ಷದ ಮಿಚೆಲ್ ಓವನ್ ಕಳೆದ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಬದಲಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿದಿದ್ದ ಅವರು ಯಾವುದೇ ರನ್ಗಳಿಸಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಟಿ20 ಕ್ರಿಕೆಟ್ನ ಭರವಸೆಯ ಯುವ ದಾಂಡಿಗನಾಗಿ ಓವನ್ ಗುರುತಿಸಿಕೊಂಡಿದ್ದಾರೆ.