ಕೇವಲ 5.64 ರನ್ ರೇಟ್: ಅತ್ಯಂತ ಹೀನಾಯ ದಾಖಲೆ ಬರೆದ ಪಾಕಿಸ್ತಾನ್
Bangladesh vs Pakistan, 1st T20I: ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಹೀನಾಯ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 19.3 ಓವರ್ಗಳಲ್ಲಿ 109 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು 15.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಬಾಂಗ್ಲಾದೇಶ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Jul 21, 2025 | 8:04 AM

ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ಪಾಕಿಸ್ತಾನ್ ತಂಡ ಮಕಾಡೆ ಮಲಗಿದೆ. ಅದು ಕೂಡ ಹೀನಾಯ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ. ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಲಿಟ್ಟನ್ ದಾಸ್ ಬೌಲಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಬಾಂಗ್ಲಾದೇಶ್ ಬೌಲರ್ಗಳು ಪವರ್ಪ್ಲೇನಲ್ಲಿ ಕೇವಲ 41 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಕೂಡ ರನ್ ಗಳಿಸಲು ಪರದಾಡಿದ ಪಾಕಿಸ್ತಾನ್ ಬ್ಯಾಟರ್ಗಳು 19.3 ಓವರ್ಗಳಲ್ಲಿ 109 ರನ್ಗಳಿಸಿ ಆಲೌಟ್ ಆಯಿತು. ವಿಶೇಷ ಎಂದರೆ ಇದು ಬಾಂಗ್ಲಾದೇಶ್ ವಿರುದ್ಧ ಟಿ20 ಪಂದ್ಯದಲ್ಲಿ ಪಾಕ್ ಕಲೆಹಾಕಿದ ಅತ್ಯಂತ ಕನಿಷ್ಠ ಸ್ಕೋರ್.

ಇದಕ್ಕೂ ಮುನ್ನ 2021 ರಲ್ಲಿ ಮಿರ್ಪುರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದ್ದು ಅತೀ ಕಡಿಮೆ ಸ್ಕೋರ್ ಆಗಿತ್ತು. ಆದರೆ ಈ ಬಾರಿ ಬಾಂಗ್ಲಾದೇಶ್ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದ ಪಾಕಿಸ್ತಾನಿಯರು ಕೇವಲ 109 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.

ಅದರಲ್ಲೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧ ಆರಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಢಾಕಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 5.64 ರನ್ ರೇಟ್ನಲ್ಲಿ 109 ರನ್ಗಳಿಸಿ ಬಾಂಗ್ಲಾದೇಶ್ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನವನ್ನು ಪಾಕಿಸ್ತಾನ್ ತಂಡ ಮುಂದಿಟ್ಟಿದೆ. ಇದಾಗ್ಯೂ ಇದು ಪಾಕ್ ತಂಡದ ಕನಿಷ್ಠ ಟಿ20 ಸ್ಕೋರ್ ಅಲ್ಲ .

ಪಾಕಿಸ್ತಾನ್ ತಂಡವು ಟಿ20 ಕ್ರಿಕೆಟ್ನಲ್ಲಿ ಕಲೆಹಾಕಿದ ಅತ್ಯಂತ ಕಡಿಮೆ ಮೊತ್ತ 74 ರನ್ಗಳು. 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 169 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 74 ರನ್ಗಳಿಗೆ ಆಲೌಟ್ ಆಗಿದ್ದರು. ಇದುವೇ ಪಾಕ್ ತಂಡದ ಟಿ20 ಇನಿಂಗ್ಸ್ನ ಅತ್ಯಂತ ಕಡಿಮೆ ಸ್ಕೋರ್. ಇದೀಗ ಬಾಂಗ್ಲಾದೇಶ್ ವಿರುದ್ಧ ಕೇವಲ 109 ರನ್ಗಳಿಸಿ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ.
