ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಗಲು ಮುಂದಿನ ವರ್ಷದ ಐಪಿಎಲ್ ಮಿನಿ ಹರಾಜುವರೆಗೆ ಕಾಯಲೇಬೇಕು. ಏಕೆಂದರೆ ಐಪಿಎಲ್ 2026ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಅಮೀರ್ ಹೆಸರು ಕೂಡ ಕಾಣಿಸಿಕೊಳ್ಳಲಿದೆ.
ಪಾಕಿಸ್ತಾನದ ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಮೊಹಮ್ಮದ್ ಅಮೀರ್, ಮುಂದಿನ ವರ್ಷ ನಾನು ಐಪಿಎಲ್ ಆಡಲು ಅರ್ಹನಾಗಿರುತ್ತೇನೆ. ಹೀಗಾಗಿ ಮಿನಿ ಹರಾಜಿಗಾಗಿ ಹೆಸರು ನೋಂದಾಯಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಅದರಂತೆ ಐಪಿಎಲ್ 2026ರ ಹರಾಜಿನಲ್ಲಿ ಪಾಕಿಸ್ತಾನ್ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಹೆಸರು ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.
ಆದರೆ ಮೊಹಮ್ಮದ್ ಅಮೀರ್ ಐಪಿಎಲ್ಗಾಗಿ ಹೆಸರು ನೋಂದಾಯಿಸುತ್ತಿರುವುದು ಪಾಕಿಸ್ತಾನ್ ಪ್ರಜೆಯಾಗಿ ಅಲ್ಲ. ಬದಲಾಗಿ ಯುಕೆ ಪೌರತ್ವದೊಂದಿಗೆ. ಅಂದರೆ ಮೊಹಮ್ಮದ್ ಅಮೀರ್ ಅವರ ಪತ್ನಿ ಇಂಗ್ಲೆಂಡ್ನವರು. ಇದೀಗ ಎಡಗೈ ವೇಗಿ ಯುಕೆ ಪಾಸ್‌ಪೋರ್ಟ್ ಪಡೆಯುವ ಆಶಯ ಹೊಂದಿದ್ದಾರೆ. ಅದರಂತೆ ಮುಂದಿನ ವರ್ಷದೊಳಗೆ ಅಮೀರ್ಗೆ ಯುಕೆ ಪೌರತ್ವ ಸಿಗಲಿದೆ.
ಈ ಪೌರತ್ವದೊಂದಿಗೆ ಮೊಹಮ್ಮದ್ ಅಮೀರ್ ಐಪಿಎಲ್ಗೆ ಹೆಸರು ರಿಜಿಸ್ಟರ್ ಮಾಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಅಮೀರ್ ಪ್ಲ್ಯಾನ್ ರೂಪಿಸಿದ್ದಾರೆ. ಹೀಗಾಗಿ ಮುಂದಿನ ವರ್ಷದ ಐಪಿಎಲ್ ಮಿನಿ ಹರಾಜಿನಲ್ಲಿ ಪಾಕಿಸ್ತಾನದ ಎಡಗೈ ವೇಗಿಯ ಹೆಸರು ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
ಈ ಹಿಂದೆ ಹಲವು ಬಾರಿ ಮೊಹಮ್ಮದ್ ಅಮೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಜತೆ ಕೂಡ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಮುಂದಿನ ವರ್ಷ ಅಮೀರ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 10:53 am, Sat, 8 March 25