147 ವರ್ಷಗಳ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಚರಿತ್ರೆ ಬರೆದ ಒಲೀ ಪೋಪ್
England vs Sri Lanka: ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಪರ ಒಲೀ ಪೋಪ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದೆ.
1 / 6
ಟೆಸ್ಟ್ ಕ್ರಿಕೆಟ್ ಶುರುವಾಗಿ 147 ವರ್ಷಗಳೇ ಕಳೆದಿವೆ. ಈ 147 ವರ್ಷಗಳಲ್ಲಿ ಯಾವುದೇ ಬ್ಯಾಟರ್ನಿಂದಲೂ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆಯನ್ನು ಒಲೀ ಪೋಪ್ ನಿರ್ಮಿಸಿದ್ದಾರೆ. ಅದು ಸಹ ಕೇವಲ 7 ಟೆಸ್ಟ್ ಶತಕಗಳೊಂದಿಗೆ ಎಂಬುದೇ ವಿಶೇಷ.
2 / 6
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಲೀ ಪೋಪ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೋಪ್ 103 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಶತಕ ಪೂರೈಸಿದ್ದಾರೆ.
3 / 6
ಈ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಮೊದಲ ಏಳು ಶತಕಗಳನ್ನು 7 ರಾಷ್ಟ್ರಗಳ ವಿರುದ್ಧ ಬಾರಿಸಿದ ವಿಶೇಷ ದಾಖಲೆಯನ್ನು ಒಲೀ ಪೋಪ್ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಪೋಪ್ ಈವರೆಗೆ 7 ಶತಕ ಸಿಡಿಸಿದ್ದು, ಈ ಏಳು ಶತಕಗಳು ಮೂಡಿಬಂದಿರುವುದು ವಿಭಿನ್ನ ದೇಶಗಳ ವಿರುದ್ಧ ಎಂಬುದು ವಿಶೇಷ.
4 / 6
ಒಲೀ ಪೋಪ್ ಮೊದಲ ಟೆಸ್ಟ್ ಶತಕ ಬಾರಿಸಿದ್ದು ಸೌತ್ ಆಫ್ರಿಕಾ (135*) ವಿರುದ್ಧ, ಇದಾದ ಬಳಿಕ ನ್ಯೂಝಿಲೆಂಡ್ (145) ವಿರುದ್ಧ 2ನೇ ಶತಕ ಸಿಡಿಸಿದ್ದರು. ಇನ್ನು ಪಾಕಿಸ್ತಾನ್ (108) ಹಾಗೂ ಭಾರತ (196) ವಿರುದ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ (121) ಶತಕ ಸಿಡಿಸಿದರೆ, ಐರ್ಲೆಂಡ್ (205) ದ್ವಿಶತಕ ಬಾರಿಸಿದ್ದಾರೆ.
5 / 6
ಇದೀಗ ಶ್ರೀಲಂಕಾ ವಿರುದ್ಧ ಅಜೇಯ 103 ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಭಿನ್ನ ಎದುರಾಳಿಗಳ ವಿರುದ್ಧ ತಮ್ಮ ಮೊದಲ ಏಳು ಶತಕಗಳನ್ನು ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಇದು ನಾಯಕನಾಗಿ ಒಲೀ ಪೋಪ್ ಅವರ ಮೊದಲ ಶತಕವಾಗಿದೆ.
6 / 6
ಅಂದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಗಾಯದ ಕಾರಣ ಹೊರಗುಳಿದಿದ್ದಾರೆ. ಹೀಗಾಗಿ ಹಂಗಾಮಿ ನಾಯಕನಾಗಿ ಕಣಕ್ಕಿಳಿದಿರುವ ಪೋಪ್ ಮೊದಲೆರಡು ಟೆಸ್ಟ್ನಲ್ಲಿ ವಿಫಲರಾಗಿದ್ದರು. ಇದೀಗ ಮೂರನೇ ಟೆಸ್ಟ್ನಲ್ಲಿ ವಿಶ್ವ ದಾಖಲೆಯ ಶತಕ ಸಿಡಿಸಿ ಟೀಕಾಗಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.