
2025 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಇದೇ ಸೆಪ್ಟೆಂಬರ್ 12 ರಂದು ಓಮನ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕಾಗಿ ತಂಡ ಕೂಡ ತಯಾರಿ ನಡೆಸುತ್ತಿದೆ. ಆದರೆ ಈ ನಡುವೆ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರ ಫಿಟ್ನೆಸ್ ಸಮಸ್ಯೆ ತಂಡದ ನಿದ್ದೆಗೆಡಿಸಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಸಲ್ಮಾನ್ ತಂಡದೊಂದಿಗಿನ ಅಭ್ಯಾಸದಿಂದ ದೂರ ಉಳಿದಿದ್ದಾರೆ.

ಜಿಯೋ ನ್ಯೂಸ್ ವರದಿಯ ಪ್ರಕಾರ, ಸಲ್ಮಾನ್ ಅಲಿ ಅಘಾ ಕುತ್ತಿಗೆ ನೋವಿನಿಂದ ಬಳಲುತ್ತಿದ್ದು ಸೆಪ್ಟೆಂಬರ್ 10 ರಂದು ನಡೆದ ಅಭ್ಯಾಸ ಅವಧಿಯಲ್ಲಿ ಹೆಚ್ಚು ಭಾಗವಹಿಸಲಿಲ್ಲ. ಸಲ್ಮಾನ್ ತಂಡದೊಂದಿಗೆ ಅಭ್ಯಾಸಕ್ಕಾಗಿ ಮೈದಾನಕ್ಕೆ ಬಂದರಾದರೂ ಅಭ್ಯಾಸದಿಂದ ದೂರವಿದ್ದರು. ಅಲ್ಲದೆ ಈ ವೇಳೆ ಅವರ ಕುತ್ತಿಗೆಗೆ ಬ್ಯಾಂಡೇಜ್ ಕೂಡ ಹಾಕಲಾಗಿತ್ತು ಎಂದು ವರದಿಯಾಗಿದೆ.

ತಂಡದ ನಾಯಕ ಸಲ್ಮಾನ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಏಕೆಂದರೆ ಓಮನ್ ವಿರುದ್ಧದ ಪಂದ್ಯದ ನಂತರ ಪಾಕ್ ತಂಡ ಟೀಂ ಇಂಡಿಯಾ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ. ಉಭಯ ದೇಶಗಳಿಗೆ ಪ್ರತಿಷ್ಠೆಯ ಕಣವಾಗಿರುವ ಈ ಪಂದ್ಯದಲ್ಲಿ ನಾಯಕನೇ ಆಡದಿದ್ದರೆ, ಪಾಕ್ ತಂಡಕ್ಕೆ ಹಿನ್ನಡೆಯಾಗುವುದು ಖಚಿತ.

ಆದಾಗ್ಯೂ ಸಲ್ಮಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸಲ್ಮಾನ್ ಅವರ ಫಿಟ್ನೆಸ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ಕೇವಲ ಮುನ್ನೆಚ್ಚರಿಕೆ ಕ್ರಮ. ಅವರು ಶೀಘ್ರದಲ್ಲೇ ಪೂರ್ಣ ಅಭ್ಯಾಸಕ್ಕೆ ಮರಳಲಿದ್ದಾರೆ. ಏಷ್ಯಾ ಕಪ್‌ನ ಪ್ರಮುಖ ಪಂದ್ಯಗಳಿಗೆ ನಾಯಕ ಫಿಟ್ ಆಗುತ್ತಾರೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಅಫ್ರಿದಿ, ಸುಫ್ಯಾನ್ ಮೊಕಿಮ್.