
ಬಾಂಗ್ಲಾದೇಶ್ ತಂಡದ ಯುವ ಆರಂಭಿಕ ದಾಂಡಿಗ ಪರ್ವೇಝ್ ಹೊಸೇನ್ ಎಮೊನ್ (Parvez Hossain Emon) ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬಾಂಗ್ಲಾದೇಶ್ ಪರ ಅತೀ ವೇಗದ ಟಿ20 ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಯುಎಇ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಮೊಹಮ್ಮದ್ ವಸೀಮ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಪರ್ವೇಝ್ ಹೊಸೇನ್ ಎಮೊನ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಲ್ಲಿ ತುಸು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಪರ್ವೇಝ್ ಆ ಬಳಿಕ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು.

ಅಲ್ಲದೆ ಕೇವಲ 54 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಪರ್ವೇಝ್ ಹೊಸೇನ್ ಎಮೊನ್ ಬ್ಯಾಟ್ ಮೇಲೆತ್ತಿದರು. ಇದರೊಂದಿಗೆ ಬಾಂಗ್ಲಾದೇಶ್ ಪರ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಸೆಂಚುರಿ ಸಿಡಿಸಿದ ದಾಖಲೆ ಪರ್ವೇಝ್ ಹೊಸೇನ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ತಮೀಮ್ ಇಕ್ಬಾಲ್ ಹೆಸರಿನಲ್ಲಿತ್ತು.

2016 ರಲ್ಲಿ ಒಮಾನ್ ವಿರುದ್ಧದ ಪಂದ್ಯದಲ್ಲಿ ತಮೀಮ್ ಇಕ್ಬಾಲ್ 63 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಟಿ20 ಕ್ರಿಕೆಟ್ನಲ್ಲಿ ಬಾಂಗ್ಲಾ ಬ್ಯಾಟರ್ ಸಿಡಿಸಿದ ಅತೀ ವೇಗದ ಶತಕವಾಗಿತ್ತು. ಇದೀಗ 8 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ 22 ವರ್ಷದ ಪರ್ವೇಝ್ ಹೊಸೇನ್ ಎಮೊನ್ ಯಶಸ್ವಿಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ ಪರ್ವೇಝ್ ಹೊಸೇನ್ ಎಮೊನ್ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 100 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡವು 20 ಓವರ್ಗಳಲ್ಲಿ 164 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ ತಂಡವು 27 ರನ್ಗಳ ಭರ್ಜರಿ ಜಯ ಸಾಧಿಸಿದೆ.