
PSL 2026: ಪಾಕಿಸ್ತಾನ್ ಸೂಪರ್ ಲೀಗ್ನಿಂದ ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಕೇಶ್ ಮೋಟಿ ಹಿಂದೆ ಸರಿದಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣ ನೀಡದಿದ್ದರೂ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಸಿಕ್ಕ ಆಫರ್ನಿಂದಾಗಿ ಗುಡಕೇಶ್ ಮೋಟಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಗುಡಕೇಶ್ ಮೋಟಿ ಅವರನ್ನು ಲಾಹೋರ್ ಖಲಂದರ್ಸ್ ಫ್ರಾಂಚೈಸಿಯು ₹1.1 ಕೋಟಿಗೆ (PKR) ಖರೀದಿಸಿತ್ತು. ಆದರೀಗ ಪಿಎಸ್ಎಲ್ ಶುರುವಾಗಲು 10 ದಿನಗಳಿರುವಾಗ ವೆಸ್ಟ್ ಇಂಡೀಸ್ ಸ್ಪಿನ್ನರ್ ಟೂರ್ನಿಯಿಂದ ಹಿಂದೆ ಸರಿದ್ದಾರೆ.

ಇದರ ಬೆನ್ನಲ್ಲೇ ಗುಡಕೇಶ್ ಮೋಟಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಎಲ್ಎಸ್ಜಿ ಪರ ಕಣಕ್ಕಿಳಿಯುವುದು ಡೌಟ್ ಎನ್ನಲಾಗಿದೆ.

ಇತ್ತ ವನಿಂದು ಹಸರಂಗ ಐಪಿಎಲ್ಗೆ ಅಲಭ್ಯರಾಗುವ ಸೂಚನೆ ಸಿಕ್ಕ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್ಮೆಂಟ್ ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಕೇಶ್ ಮೋಟಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ಮೋಟಿ ಪಾಕಿಸ್ತಾನ್ ಸೂಪರ್ ಲೀಗ್ಗೆ ಕೈ ಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಇದಕ್ಕೂ ಮುನ್ನ ಝಿಂಬಾಬ್ವೆ ಆಟಗಾರ ಬ್ಲೆಸ್ಸಿಂಗ್ ಮುಝರಬಾನಿ ಕೂಡ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದರು. ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಆಯ್ಕೆಯಾಗಿದ್ದ ಮುಝರಬಾನಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಬ್ಲೆಸ್ಸಿಂಗ್ ಮುಝರಬಾನಿ ಪಿಎಸ್ಎಲ್ಗೆ ಕೈ ಕೊಟ್ಟಿದ್ದರು. ಇದೀಗ ಗುಡಕೇಶ್ ಮೋಟಿ ಕೂಡ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕಿರುವ ಕಾರಣ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.