Updated on: Aug 21, 2022 | 9:25 PM
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 15 ವರ್ಷಗಳು ಕಳೆದಿವೆ. 2008 ರಲ್ಲಿ ಶುರುವಾಗಿದ್ದ ಐಪಿಎಲ್ ಟೂರ್ನಿಯೂ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಗುರುತಿಸಿಕೊಂಡಿದೆ. ಈ ಲೀಗ್ನ ಮೊದಲ ಪಂದ್ಯ ನಡೆದಿರುವುದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.
ಅಂದು ಚೊಚ್ಚಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಾಹುಲ್ ದ್ರಾವಿಡ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ದ್ರಾವಿಡ್ ಅವರ ನಿರ್ಧಾರ ತಪ್ಪು ಎಂಬುದನ್ನು ಪವರ್ಪ್ಲೇನಲ್ಲೇ ಕೆಕೆಆರ್ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಂ ನಿರೂಪಿಸಿದ್ದರು.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಮೆಕಲಂ ಕೇವಲ 73 ಎಸೆತಗಳಲ್ಲಿ 13 ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 158 ರನ್ ಚಚ್ಚಿದರು. ಪರಿಣಾಮ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ತಂಡವು 15.1 ಓವರ್ಗಳಲ್ಲಿ 82 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಸೌರವ್ ಗಂಗೂಲಿ ನೇತೃತ್ವದ ಕೆಕೆಆರ್ ತಂಡವು ಐಪಿಎಲ್ನ ಮೊದಲ ಪಂದ್ಯದಲ್ಲಿ 140 ರನ್ಗಳ ಜಯಭೇರಿ ಬಾರಿಸಿತ್ತು. ಅಂದು ಮೊದಲ ಪಂದ್ಯದಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ಆರ್ಸಿಬಿ ಪರ ಕಣಕ್ಕಿಳಿದ 11 ಆಟಗಾರರ ಯಾರೆಲ್ಲಾ ಗೊತ್ತಾ...
ರಾಹುಲ್ ದ್ರಾವಿಡ್ (ನಾಯಕ)
ವಾಸಿಂ ಜಾಫರ್
ವಿರಾಟ್ ಕೊಹ್ಲಿ
ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ)
ಕೆಮರೂನ್ ವೈಟ್ (ಆಸ್ಟ್ರೇಲಿಯಾ)
ಮಾರ್ಕ್ ಬೌಚರ್ (ಸೌತ್ ಆಫ್ರಿಕಾ)
ಬಾಲಚಂದ್ರ ಅಖಿಲ್
ಆಶ್ಲೇ ನೋಫ್ಕೆ (ಆಸ್ಟ್ರೇಲಿಯಾ)
ಪ್ರವೀಣ್ ಕುಮಾರ್
ಸುನೀಲ್ ಜೋಶಿ
ಜಹೀರ್ ಖಾನ್
ಅಂದು ಮೊದಲ ಪಂದ್ಯವಾಡಿದ 10 ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿದು ಇದೀಗ ನಿವೃತ್ತಿ ಹೊಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈಗಲೂ ಆರ್ಸಿಬಿ ತಂಡದಲ್ಲಿದ್ದಾರೆ ಎಂಬುದೇ ವಿಶೇಷ.