
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡದ ಫೈನಲ್ ಲೆಕ್ಕಾಚಾರ ಕೂಡ ಬದಲಾಗಿದೆ.

ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತಂಡವು ಗೆಲುವು ದಾಖಲಿಸಿದ್ದರೆ ನೇರವಾಗಿ ಫೈನಲ್ಗೇರಬಹುದಿತ್ತು. ಆದರೆ ಇದೀಗ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಅನಿವಾರ್ಯವಾಗಿ ಮಾರ್ಪಟ್ಟಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸುತ್ತದೆ. ಇನ್ನು 2ನೇ ಮತ್ತು 3ನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಇತ್ತ ಆರ್ಸಿಬಿ ತಂಡವು ಈಗಾಗಲೇ 10 ಅಂಕಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದೀಗ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್ಸಿಬಿ ತಂಡವು ಮುಂದಿನ ಎರಡು ಮ್ಯಾಚ್ಗಳಲ್ಲಿ ಒಂದು ಪಂದ್ಯದಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶಿಸಲಿದೆ.

ಏಕೆಂದರೆ ಆರ್ಸಿಬಿ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡಕ್ಕೆ 12 ಅಂಕಗಳನ್ನು ಪಡೆಯಲು ಅವಕಾಶವಿಲ್ಲ. ಉಳಿದ ನಾಲ್ಕು ತಂಡಗಳು ಮುಂದಿನ ಎಲ್ಲಾ ಮ್ಯಾಚ್ಗಳನ್ನು ಗೆದ್ದರೂ ಒಟ್ಟು 10 ಅಂಕಗಳನ್ನು ಮಾತ್ರ ಪಡೆಯಬಹುದು. ಹೀಗಾಗಿ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಗೆದ್ದರೆ ಫೈನಲ್ಗೇರುವುದು ಖಚಿತ.

ಅದರಂತೆ ಜನವರಿ 26 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಥವಾ ಜನವರಿ 29 ರಂದು ನಡೆಯಲಿರುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಫೈನಲ್ಗೆ ಪ್ರವೇಶಿಸುತ್ತದೆ. ಹೀಗಾಗಿ ನೇರವಾಗಿ ಫೈನಲ್ಗೆ ಪ್ರವೇಶಿಸಲು ಆರ್ಸಿಬಿ ತಂಡವು ಮುಂದಿನ 2 ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆಲ್ಲಲೇಬೇಕು.