ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜುಲೈ 12 ರಿಂದ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಈಗಾಗಲೇ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ತಲುಪಿದ್ದು, ಅಭ್ಯಾಸ ಕೂಡ ಆರಂಭಿಸಿದೆ.
ಅಭ್ಯಾಸ ಪಂದ್ಯದಲ್ಲಿ ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಕಳಪೆ ಫಾರ್ಮ್ನಿಂದ ಲಯ ಕಂಡುಕೊಂಡಂತೆ ಕಾಣುತ್ತಿದೆ.
ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಅದರಂತೆ ಅಭ್ಯಾಸ ಪಂದ್ಯದಲ್ಲಿ ಕೂಡ ಜೈಸ್ವಾಲ್ ಭರವಸೆ ಮೂಡಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ರೋಹಿತ್ ಜೊತೆ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಹಿಂದೆ ಆರಂಭಿಕನಾಗಿ ಆಡುತ್ತಿದ್ದ ಶುಭ್ಮನ್ ಗಿಲ್ ಅವರು ಚೇತೇಶ್ವರ್ ಪೂಜಾರ ಅವರ ಮೂರನೇ ಕ್ರಮಾಂಕವನ್ನು ತುಂಬಲಿದ್ದಾರಂತೆ.
ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ನಂತರದ ಸ್ಥಾನವನ್ನು ತುಂಬಲಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಥಾನ ಕೂಡ ಖಚಿತವಾಗಿದೆ.
ಶಾರ್ದೂಲ್ ಥಾಕೂರ್ ಮತ್ತು ಅಕ್ಷರ್ ಪಟೇಲ್ ನಡುವೆ ಯಾರಿಗೆ ಅವಕಾಶ ನೀಡಲಾಗುತ್ತೆ ಎಂಬುದು ನೋಡಬೇಕಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಪಿಚ್ ಯಾರಿಗೆ ಹೆಚ್ಚು ಸಹಕಾರ ನೀಡುತ್ತೆ ಎಂಬುದರ ಮೇಲೆ ನಿರ್ಧಾರವಾಗಲಿದೆ.
ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ. ವಿಂಡೀಸ್ ಕಾಲಮಾನದ ಪ್ರಕಾರ ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಆದರೆ, ಇದು ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.