
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಇದೀಗ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಆದರೆ ಈ ವಿಶ್ವ ದಾಖಲೆ ನಿರ್ಮಿಸಲು ಹಿಟ್ಮ್ಯಾನ್ ಮುಂದಿನ ವರ್ಷದವರೆಗೆ ಕಾಯಲೇಬೇಕು ಎಂಬುದೇ ವಿಶೇಷ.

ಅಂದರೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಹಿಟ್ಮ್ಯಾನ್ ಇದೀಗ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅದು ಸಹ ಸಿಕ್ಸರ್ ಸರದಾರ ಕ್ರಿಸ್ ಗೇಲ್ ಅವರ ಸಿಕ್ಸರ್ ದಾಖಲೆಯನ್ನು ಸರಿಗಟ್ಟುವ ಮೂಲಕ. ಇದೀಗ ಗೇಲ್ ಅವರನ್ನು ಹಿಂದಿಕ್ಕಲು ರೋಹಿತ್ ಶರ್ಮಾಗೆ ಒಂದು ಸಿಕ್ಸ್ನ ಅವಶ್ಯಕತೆಯಿದೆ.

ಈ ಒಂದು ಸಿಕ್ಸ್ ಸಿಡಿಸಲು ರೋಹಿತ್ ಶರ್ಮಾ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯವರೆಗೆ ಕಾಯಲೇಬೇಕು. ಏಕೆಂದರೆ ಈ ವರ್ಷ ಭಾರತ ತಂಡಕ್ಕೆ ಯಾವುದೇ ಏಕದಿನ ಸರಣಿಯಿಲ್ಲ. ಹೀಗಾಗಿ 2025 ರಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕವಷ್ಟೇ ಹಿಟ್ಮ್ಯಾನ್ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಮೇಲೇರಬಹುದು.

ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ಸ್ಪೋಟಕ ದಾಂಡಿಗ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. 369 ಏಕದಿನ ಇನಿಂಗ್ಸ್ ಆಡಿರುವ ಅಫ್ರಿದಿ ಒಟ್ಟು 351 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುನಿವರ್ಸ್ ಬಾಸ್ ಖ್ಯಾತಿಯ ಗೇಲ್ 294 ಏಕದಿನ ಇನಿಂಗ್ಸ್ಗಳಿಂದ 331 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಒನ್ಡೇ ಕ್ರಿಕೆಟ್ನ 2ನೇ ಸಿಕ್ಸರ್ ಕಿಂಗ್ಸ್ ಎನಿಸಿಕೊಂಡಿದ್ದಾರೆ.

ಇದೀಗ ಕ್ರಿಸ್ ಗೇಲ್ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ. 257 ಏಕದಿನ ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು 331 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಇನ್ನೊಂದು ಸಿಕ್ಸ್ ಬಾರಿಸಿದರೆ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದು ಸಿಕ್ಸರ್ ಸರದಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರಲಿದ್ದಾರೆ.