
2026 ರ ಟಿ20 ವಿಶ್ವಕಪ್‌ಗೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಕೂಡ ಈ ಟೂರ್ನಿಗೆ ತನ್ನ ತಯಾರಿಯನ್ನು ಅಂತಿಮಗೊಳಿಸುತ್ತಿದೆ. ಆದರೆ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಮಾತ್ರ ಕಳವಳಕಾರಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿಯೂ ಸಂಜು ಬ್ಯಾಟ್ನಿಂದ ಒಂದೊಳ್ಳೆ ಇನ್ನಿಂಗ್ಸ್ ಮೂಡಿಬಂದಿಲ್ಲ.

ಈ ಸರಣಿಯ ಮೊದಲ ಮೂರು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಆದರೆ ಸ್ಯಾಮ್ಸನ್ ಮಾತ್ರ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸಂಜುಗೆ ಸತತ ಅವಕಾಶಗಳನ್ನು ನೀಡಲಾಗುತ್ತಿದೆಯಾದರೂ ಸಂಜುಗೆ ಉತ್ತಮ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಸಂಜು ಅವರ ವೈಫಲ್ಯದ ಬಗ್ಗೆ ಮಾತನಾಡಿರುವ ಅಜಿಂಕ್ಯ ರಹಾನೆ, ಸಂಜು ಮತ್ತೊಬ್ಬರ ಆಟವನ್ನು ನಕಲು ಮಾಡುವುದನ್ನು ಬಿಡಬೇಕು ಎಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಔಟಾದರು. ಹಿಂದಿನ ಎರಡು ಪಂದ್ಯಗಳಲ್ಲಿ ಅವರು 10 ಮತ್ತು 6 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ, ಸರಣಿಯ ಮೂರು ಪಂದ್ಯಗಳಲ್ಲಿ, ಅವರು 13 ಎಸೆತಗಳನ್ನು ಎದುರಿಸಿ ಕೇವಲ 16 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಸಂಜು ಅವರ ಪ್ರದರ್ಶನದಿಂದ ಆಯ್ಕೆ ಮಂಡಳಿ ಅಸಮಾಧಾನಗೊಂಡಿದ್ದು, ಮಾಜಿ ಆಟಗಾರರು ಟೀಕೆಗಳ ಸುರಿಮಳೆಗೈದಿದ್ದಾರೆ.

ಮೂರನೇ ಟಿ20ಪಂದ್ಯದ ನಂತರ, ಕ್ರಿಕ್‌ಬಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ಎಲ್ಲಿ ತಪ್ಪು ಮಾಡುತ್ತಿದ್ದಾರೆಂದು ವಿವರಿಸಿದರು. ‘ಸ್ಯಾಮ್ಸನ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಆಡುವ ಮೂಲಕ ತನ್ನ ಸಹ ಆರಂಭಿಕ ಆಟಗಾರ ಅಭಿಷೇಕ್ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅವರ ವಿಕೆಟ್ ಪತನಕ್ಕೆ ಕಾರಣವಾಗುತ್ತಿದೆ.

‘ಕೆಲವೊಮ್ಮೆ ಅಭಿಷೇಕ್ ಶರ್ಮಾ ಅವರಂತಹ ಬ್ಯಾಟ್ಸ್‌ಮನ್ ಇನ್ನೊಂದು ಬದಿಯಲ್ಲಿ ವೇಗವಾಗಿ ರನ್ ಗಳಿಸುತ್ತಿದ್ದಾಗ ಸಂಜು ಸ್ಯಾಮ್ಸನ್ ಒತ್ತಡಕ್ಕೊಳಗಾಗುವುದು ಸಾಮಾನ್ಯ. ಹೀಗಾಗಿ ಸಂಜು, ಅಭಿಷೇಕ್ ಶರ್ಮಾ ಅವರಂತೆ ತಾನು ಕೂಡ ಆಡುವುದಕ್ಕೆ ಯತ್ನಿಸುತ್ತಿದ್ದಾರೆ. ಆದರೆ ಸಂಜು ತನ್ನ ಆಟವನ್ನು ಆಡುವುದನ್ನು ಮುಂದುವರೆಸಬೇಕು. ಪ್ರಸ್ತುತ ಅವರಿಗೆ ಇದರ ಅವಶ್ಯಕತೆ’ ಇದೆ ಎಂದಿದ್ದಾರೆ.

ಈ ಸರಣಿಯಲ್ಲಿ ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿ, ವಿಶೇಷವಾಗಿ ಇಶಾನ್ ಕಿಶನ್, ತಂಡಕ್ಕೆ ಮರಳಿದ ನಂತರ ವೇಗವಾಗಿ ರನ್ ಗಳಿಸುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ, ಇಶಾನ್ ಕೇವಲ 32 ಎಸೆತಗಳಲ್ಲಿ 76 ರನ್ ಗಳಿಸಿದರೆ, ಮೂರನೇ ಪಂದ್ಯದಲ್ಲಿ 13 ಎಸೆತಗಳಲ್ಲಿ 28 ರನ್ ಗಳಿಸಿದರು. ಈ ಪರಿಸ್ಥಿತಿಯಲ್ಲಿ, ತಂಡದ ಮ್ಯಾನೇಜ್‌ಮೆಂಟ್ ಸ್ಯಾಮ್ಸನ್ ಅವರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಬೇಕು ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.