
ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಸ್ಯಾಮ್ಸನ್ ತಂಡ ಸೇರಿಕೊಳ್ಳಲಿದ್ದಾರೆ. ಈ ಹಿಂದೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಇವರನ್ನು ಕೈಬಿಡಲಾಗಿತ್ತು.

ಕೆರಿಬಿಯನ್ ಪ್ರವಾಸದಿಂದ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಸ್ಯಾಮ್ಸನ್ ಆಯ್ಕೆದಾರರ ಲಿಸ್ಟ್ನಲ್ಲಿ ಇದ್ದಾರೆ. ರಿಷಭ್ ಪಂತ್ ಅವರು ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಇರುವುದಿಲ್ಲ. ಹೀಗಾಗಿ ಇಶಾನ್ ಕಿಶನ್ ಜೊತೆ ಸ್ಯಾಮ್ಸನ್ ಕೂಡ ತಂಡದಲ್ಲಿ ಇರಲಿದ್ದಾರೆ.

ಸ್ಯಾಮ್ಸನ್ ಅವರು ಕೇವಲ ಟಿ20 ಮಾತ್ರವಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ. ಕೆಎಲ್ ರಾಹುಲ್ ಅಲಭ್ಯತೆಯಲ್ಲಿ ಇವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

ಸ್ಯಾಮ್ಸನ್ ಜೊತೆಗೆ ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ರಿಂಕು ಸಿಂಗ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಅರ್ಶ್ದೀಪ್ ಸಿಂಗ್ ಸೇರಿದಂತೆ ಕೆಲ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಆಗಲಿದ್ದಾರಂತೆ. ಇದರಲ್ಲಿ ಜೈಸ್ವಾಲ್ ಹಾಗೂ ಅರ್ಶ್ದೀಪ್ ಟೆಸ್ಟ್ ತಂಡಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ.

ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸ ಜುಲೈ 12 ರಿಂದ 16 ರವರೆಗೆ ನಡೆಯಲಿರುವ ಮೊದಲ ಟೆಸ್ಟ್ ಮೂಲಕ ಶುರುವಾಗಲಿದೆ. ಬಳಿಕ ಜುಲೈ 20 ರಿಂದ 24 ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ದ್ವಿತೀಯ ಟೆಸ್ಟ್ ನಡೆಯಲಿದೆ.

ಟೆಸ್ಟ್ ಸರಣಿ ನಂತರ ಮೂರು ಏಕದಿನ ಪಂದ್ಯಗಳ ಸರಣಿಯು ನಡೆಯಲಿದೆ. ಜುಲೈ 27, 29 ಹಾಗೂ ಆಗಸ್ಟ್ 1 ರಂದು ಈ ಪಂದ್ಯವನ್ನು ಆಯೋಜಿಸಲಾಗಿದೆ.

ಕೊನೆಯದಾಗಿ ಟಿ20 ಸರಣಿ ಆಯೋಜಿಸಲಾಗಿದ್ದು, ಆಗಸ್ಟ್ 3, ಆಗಸ್ಟ್ 6, 8, 12 ಹಾಗೂ ಆ. 13 ರಂದು ನಡೆಯಲಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಜೂನ್ 27 ರಂದು ಪ್ರಕಟ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.