
ಸರ್ಫರಾಝ್ ಖಾನ್ (Sarfaraz Khan) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದೇಶೀಯ ಅಂಗಳದಲ್ಲಿ ಒಂದೇ ಸೀಸನ್ನಲ್ಲಿ ಮೂರು ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಗಳೊಂದಿಗೆ ವಿಶೇಷ ಸಾಧನೆಗೈದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸರ್ಫರಾಝ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ 219 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್ಗಳೊಂದಿಗೆ 227 ರನ್ ಬಾರಿಸಿ ಅಬ್ಬರಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ ಗೋವಾ ವಿರುದ್ಧದ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸರ್ಫರಾಝ್ ಖಾನ್ ಕೇವಲ 75 ಎಸೆತಗಳಲ್ಲಿ 14 ಸಿಕ್ಸರ್ ಹಾಗೂ 9 ಫೋರ್ಗಳೊಂದಿಗೆ 157 ರನ್ ಬಾರಿಸಿದ್ದರು.

ಈ ಮೇಲಿನ ಎರಡು ಶತಕಗಳಿಗೂ ಮುನ್ನ ಸರ್ಫರಾಝ್ ಖಾನ್ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಸ್ಸಾಂ ವಿರುದ್ಧ ಕೇವಲ 47 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂರು ಶತಕಗಳೊಂದಿಗೆ ಇದೀಗ ಸರ್ಫರಾಝ್ ಖಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಂದರೆ ಒಂದೇ ಸೀಸನ್ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದ್ವಿಶತಕ, ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ 150 ಹಾಗೂ ಟಿ20 ಕ್ರಿಕೆಟ್ನಲ್ಲಿ 100 ರನ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್ ಡೇನಿಯಲ್ ಬೆಲ್-ಡ್ರಮಂಡ್ ಹಾಗೂ ಅಲೆಕ್ಸ್ ಹೇಲ್ಸ್ ಮಾತ್ರ ಈ ಸಾಧನೆ ಮಾಡಿದ್ದರು. 2016 ಮತ್ತು 2023 ರಲ್ಲಿ ಡೇನಿಯಲ್ ಬೆಲ್-ಡ್ರಮಂಡ್ ಒಂದೇ ಸೀಸನ್ನಲ್ಲೂ ಮೂರು ಸ್ವರೂಪಗಳಲ್ಲಿ 200+, 150+, 100+ ರನ್ ಗಳಿಸಿದ್ದರು. ಇದಾದ ಬಳಿಕ 2017 ರಲ್ಲಿ ಅಲೆಕ್ಸ್ ಹೇಲ್ಸ್ ಈ ಸಾಧನೆ ಸರಿಗಟ್ಟಿದ್ದರು.

ಇದೀಗ ಸರ್ಫರಾಝ್ ಖಾನ್ 2025-26 ರ ದೇಶೀಯ ಸೀಸನ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 200+, ಏಕದಿನ ಕ್ರಿಕೆಟ್ನಲ್ಲಿ 150+ ರನ್, ಟಿ20 ಕ್ರಿಕೆಟ್ನಲ್ಲಿ 100+ ರನ್ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಶೇಷ ವಿಶ್ವ ದಾಖಲೆ ಬರೆದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
Published On - 2:08 pm, Sat, 24 January 26