
ವೆಸ್ಟ್ ಇಂಡೀಸ್ ಏಕದಿನ ತಂಡದ ನಾಯಕ ಶಾಯ್ ಹೋಪ್ (Shai Hope) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ಶತಕ ಸಿಡಿಸುವ ಮೂಲಕ. ನ್ಯೂಝಿಲೆಂಡ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹೋಪ್ 69 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದ್ದರು.

ಈ ಭರ್ಜರಿ ಸೆಂಚುರಿಯೊಂದಿಗೆ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಎಲ್ಲಾ ರಾಷ್ಟ್ರಗಳ ವಿರುದ್ಧ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಭಾರತ, ಪಾಕಿಸ್ತಾನ್, ಶ್ರೀಲಂಕಾ, ಝಿಂಬಾಬ್ವೆ, ಬಾಂಗ್ಲಾದೇಶ್, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳ ವಿರುದ್ಧ ಸೆಂಚುರಿ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಶಾಯ್ ಹೋಪ್ ನಿರ್ಮಿಸಿದ್ದಾರೆ.

ಶತಕಗಳ ಸರದಾರ ಎನಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಸೆಂಚುರಿ ಸಿಡಿಸಿದ್ದಾರೆ. ಈ ವೇಳೆ ಅವರು 11 ದೇಶಗಳ ಶತಕ ಸಿಡಿಸಿದರೂ, ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಎಲ್ಲಾ ರಾಷ್ಟ್ರಗಳ ವಿರುದ್ಧ ಶತಕ ಬಾರಿಸಿರಲಿಲ್ಲ ಎಂಬುದು ವಿಶೇಷ. ಅಂದರೆ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ್ ವಿರುದ್ಧ ಸಚಿನ್ ಬ್ಯಾಟ್ನಿಂದ ಸೆಂಚುರಿ ಮೂಡಿಬಂದಿಲ್ಲ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 82 ಶತಕ ಸಿಡಿಸಿರುವ ವಿರಾಟ್ ಕೊಹ್ಲಿಗೂ ಕೂಡ ಐಸಿಸಿಯ ಎಲ್ಲಾ ಪೂರ್ಣ ಸದಸ್ಯ ರಾಷ್ಟ್ರಗಳ ವಿರುದ್ಧ ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ. ಅಂದರೆ ಕೊಹ್ಲಿ 10 ದೇಶಗಳ ವಿರುದ್ಧ ಶತಕ ಸಿಡಿಸಿದ್ದಾರೆ. ಆದರೆ ಐರ್ಲೆಂಡ್ ವಿರುದ್ಧ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಮೂರಂಕಿ ಮೊತ್ತ ಮೂಡಿಬಂದಿಲ್ಲ.

ಇದೀಗ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ 11 ದೇಶಗಳ ವಿರುದ್ಧ ಸೆಂಚುರಿ ಸಿಡಿಸಿ ಶಾಯ್ ಹೋಪ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ್ ವಿರುದ್ಧ ತಲಾ 3 ಸೆಂಚುರಿ ಸಿಡಿಸಿರುವ ಹೋಪ್ ಇಂಗ್ಲೆಂಡ್, ಶ್ರೀಲಂಕಾ ಹಾಗೂ ಪಾಕಿಸ್ತಾನ್ ವಿರುದ್ಧ ತಲಾ 2 ಶತಕ ಬಾರಿಸಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಐರ್ಲೆಂಡ್, ಆಸ್ಟ್ರೇಲಿಯಾ, ಐರ್ಲೆಂಡ್, ನ್ಯೂಝಿಲೆಂಡ್ ತಲಾ ಒಂದೊಂದು ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ 11 ತಂಡಗಳ ವಿರುದ್ಧ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.