
ನೇಪಾಳ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ (NPL 2024) ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಗಾಗಿ ಕರ್ನಾಲಿ ಯಾಕ್ಸ್ ಫ್ರಾಂಚೈಸಿ ಜೊತೆ ಧವನ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಚೊಚ್ಚಲ ಎನ್ಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಕಣಕ್ಕಿಳಿಯಲಿದ್ದಾರೆ.

ಚೊಚ್ಚಲ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 8 ತಂಡಗಳು ಕಾಣಿಸಿಕೊಳ್ಳಲಿವೆ. ಈಗಾಗಲೇ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆ ಮುಗಿದಿದ್ದು, ಅದರಂತೆ ಬಿರಾಟ್‌ನಗರ ಕಿಂಗ್ಸ್, ಚಿಟ್ವಾನ್ ರೈನೋಸ್, ಜನಕ್‌ಪುರ್ ಬೋಲ್ಟ್ಸ್, ಕಠ್ಮಂಡು ಗೂರ್ಖಾಸ್, ಲುಂಬಿನಿ ಲಯನ್ಸ್, ಪೋಖರಾ ಅವೆಂಜರ್ಸ್, ಕರ್ನಾಲಿ ಯಾಕ್ಸ್ ಮತ್ತು ಸುದುರ್ಪಶ್ಚಿಮ್ ರಾಯಲ್ಸ್ ತಂಡಗಳು ಕಣಕ್ಕಿಳಿಯಲಿವೆ.

ಇದೀಗ ಈ ಟೂರ್ನಿಗೆ ಸ್ಟಾರ್ ಆಟಗಾರನಾಗಿ ಶಿಖರ್ ಧವನ್ ಎಂಟ್ರಿ ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ಧವನ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಧವನ್ ಇತ್ತೀಚೆಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡಿದ್ದರು.

ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಆಡುವ ಭಾರತೀಯ ಆಟಗಾರರು ಯಾವುದೇ ಫ್ರಾಂಚೈಸಿ ಲೀಗ್ಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಇತರೆ ಲೀಗ್ಗಳಲ್ಲಿ ಕಾಣಿಸಿಕೊಂಡರೆ ಅವರು ಐಪಿಎಲ್ಗೆ ಅನರ್ಹರಾಗಲಿದ್ದಾರೆ. ಅದರಂತೆ ಲೆಜೆಂಡ್ಸ್ ಲೀಗ್ ಆಡಿರುವ ಕಾರಣ ಶಿಖರ್ ಧವನ್ ಇನ್ಮುಂದೆ ಐಪಿಎಲ್ ಆಡುವಂತಿಲ್ಲ.

ಇದೇ ಕಾರಣದಿಂದಾಗಿ ಇದೀಗ ಶಿಖರ್ ಧವನ್ ವಿದೇಶಿ ಲೀಗ್ಗಳತ್ತ ಮುಖ ಮಾಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಮೂಲಕ ಗಬ್ಬರ ಪಕ್ಕದ ನೇಪಾಳದಲ್ಲೂ ಘರ್ಜಿಸುವ ವಿಶ್ವಾಸದಲ್ಲಿದ್ದಾರೆ.

ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶಿಖರ್ ಧವನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಒಟ್ಟು 222 ಮ್ಯಾಚ್ಗಳನ್ನಾಡಿರುವ ಅವರು 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಳಿಕ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.