
ಭಾರತ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಮತ್ತೆ ಕಣಕ್ಕಿಳಿಯಲು ಮುಂದಿನ ವರ್ಷದವರೆಗೆ ಕಾಯಬೇಕಿದೆ. ಏಕೆಂದರೆ ಗಿಲ್ ನರಗಳ ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನ ಬ್ಯಾಟಿಂಗ್ ವೇಳೆ ಶುಭ್ಮನ್ ಗಿಲ್ ಅವರು ಕುತ್ತಿಗೆ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದರು.

ಇದಾದ ಬಳಿಕ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದ ಶುಭ್ಮನ್ ಗಿಲ್ ಅವರ ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ನರಗಳಲ್ಲಿ ಸೆಳೆತವಿರುವುದು ಕಂಡು ಬಂದಿದೆ. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಗಿಲ್ ಮುಂಬೈನ ಖ್ಯಾತ ವೈದ್ಯ ಡಾ. ಅಭಯ್ ನೇನೆ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಭಯ್ ನೇನೆ ಅವರು ಕೂಡ ಶುಭ್ಮನ್ ಗಿಲ್ ಅವರು ನರಗಳ ಸೆಳೆತದಿಂದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಂದ ಗಿಲ್ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಅಲ್ಲದೆ ಮುಂದಿನ ವರ್ಷ ಜನವರಿ 11 ರಿಂದ ಶುರುವಾಗಲಿರುವ ನ್ಯೂಝಿಲೆಂಡ್ ವಿರುದ್ಧದದ ಸರಣಿಯ ಮೂಲಕ ಶುಭ್ಮನ್ ಗಿಲ್ ಮತ್ತೆ ಮರಳುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಭಾರತ ತಂಡದಿಂದ ಗಿಲ್ ಹೊರಗುಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.
Published On - 12:54 pm, Sun, 23 November 25