Smriti Mandhana Birthday: ಸ್ಮೃತಿ ಮಂಧಾನ ಹೆಸರಿನಲ್ಲಿದೆ 5 ಭರ್ಜರಿ ದಾಖಲೆಗಳು
Smriti Mandhana Birthday: ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಇಂದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆರ್ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿರುವ ದಾಖಲೆ ಹೊಂದಿರುವ ಸ್ಮೃತಿ ಮಂಧಾನ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
1 / 6
ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನಗೆ (Smriti Mandhana) ಇಂದು ಹುಟ್ಟುಹಬ್ಬದ ಸಂಭ್ರಮ. 1996, ಜುಲೈ 18 ರಂದು ಜನಿಸಿದ ಸ್ಮೃತಿ ಇಂದು 28 ವರ್ಷಕ್ಕೆ ಕಾಲಿಟ್ಟಿದ್ದಾರೆ. 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾರ್ದಪಣೆ ಮಾಡಿದ್ದ ಸ್ಮೃತಿ ಮಂಧಾನ ಈವರೆಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಇಣುಕು ನೋಟ ಇಲ್ಲಿದೆ...
2 / 6
ಏಕದಿನ ಕ್ರಿಕೆಟ್ನಲ್ಲಿ ಚೇಸಿಂಗ್ ವೇಳೆ ಸತತವಾಗಿ ಅತೀ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ವಿಶ್ವ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿದೆ. ಮಂಧಾನ 2021 ರಲ್ಲಿ ಸತತವಾಗಿ 10 ಬಾರಿ 50+ ಸ್ಕೋರ್ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
3 / 6
ಎರಡು ಬಾರಿ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ತಾರೆ ಸ್ಮೃತಿ ಮಂಧಾನ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ್ತಿ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಎರಡು ಬಾರಿ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು. ಸ್ಮೃತಿ ಮಂಧಾನ 2018 ಮತ್ತು 2021 ರಲ್ಲಿ ಈ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಪೆರ್ರಿ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
4 / 6
ಆಸ್ಟ್ರೇಲಿಯಾದಲ್ಲಿ ಏಕದಿನ ಮತ್ತು ಟೆಸ್ಟ್ ಶತಕ ಗಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಕೂಡ ಸ್ಮೃತಿ ಮಂಧಾನ ಹೆಸರಿನಲ್ಲಿದೆ. 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೋಬರ್ಟ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸ್ಮೃತಿ 109 ಎಸೆತಗಳಲ್ಲಿ 102 ರನ್ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮಂಧಾನ 216 ಎಸೆತಗಳಲ್ಲಿ 127 ರನ್ ಬಾರಿಸಿ ಈ ಸಾಧನೆ ಮಾಡಿದ್ದಾರೆ.
5 / 6
ಮಹಿಳಾ ಏಕದಿನ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಆಟಗಾರ್ತಿ ಎಂಬ ದಾಖಲೆ ಕೂಡ ಸ್ಮೃತಿ ಮಂಧಾನ ಹೆಸರಿನಲ್ಲಿದೆ. 2024 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ 3 ಇನ್ನಿಂಗ್ಸ್‌ಗಳಲ್ಲಿ 343 ರನ್ ಕಲೆಹಾಕುವ ಮೂಲಕ ಸ್ಮೃತಿ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
6 / 6
ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಸೆಂಚುರಿ ಸಿಡಿಸಿದ ಮಹಿಳಾ ಆಟಗಾರ್ತಿ ಎಂಬ ದಾಖಲೆ ಕೂಡ ಸ್ಮೃತಿ ಮಂಧಾನ ಹೆಸರಿನಲ್ಲಿದೆ. ಒಟ್ಟು 7 ಶತಕಗಳನ್ನು ಬಾರಿಸುವ ಮೂಲಕ ಸ್ಮತಿ ಮಂಧಾನ ಮಾಜಿ ಆಟಗಾರ್ತಿ ಮಿಥಾಲಿ ರಾಜ್ (7 ಶತಕ) ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿ ಅಗ್ರಸ್ಥಾನಕ್ಕೇರಿದ್ದಾರೆ.