
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ತ್ರಿಕೋನ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ಗೆ ಸೋಲುಣಿಸಿ ಫೈನಲ್ ತಲುಪಿದ್ದ ಭಾರತ ಮಹಿಳಾ ತಂಡ ಫೈನಲ್ಗೆ ಪ್ರವೇಶ ಪಡೆದಿತ್ತು. ಆದರೆ, ಫೈನಲ್ ಕಾದಾಟದಲ್ಲಿ ಹರಿಣಗಳ ದಾಳಿಗೆ ತತ್ತರಿಸಿದ ಹರ್ಮನ್ಪ್ರೀತ್ ಪಡೆ ಸೋಲುಂಡಿದೆ.

ಈಸ್ಟ್ ಲಂಡನ್ನ ಬಫೆಲೊ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ತ್ರಿಕೋನ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮುನಃ ಕಳಪೆ ಆರಂಭ ಪಡೆದುಕೊಂಡಿತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಜೆಮಿಯಾ ರೋಡ್ರಿಗಸ್ 11 ರನ್ಗೆ ಔಟಾದರು.

ಈ ಸಂದರ್ಭ ಜೊತೆಯಾದ ಹರ್ಲಿನ್ ಡಿಯೋಲ್ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಕೆಲಹೊತ್ತು ತಂಡಕ್ಕೆ ಆಸರೆಯಾದರು. ಕೌರ್ 22 ಎಸೆತಗಳಲ್ಲಿ 21 ರನ್ ಕಲೆಹಾಕಿದರೆ, ಹರ್ಲಿನ್ 56 ಎಸೆತಗಳಲ್ಲಿ 46 ರನ್ ಬಾರಿಸಿದರು.

ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 16 ಹಾಗೂ ಪೂಜಾ ವಸ್ತ್ರಾಕರ್ ಅಜೇಯ 1 ರನ್ ಕಲೆಹಾಕಿದರು. ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಆಫ್ರಿಕಾ ಪರ ನಾನ್‌ಕುಲುಲೆಕೊ ಮ್ಲಾಬಾ 2 ವಿಕೆಟ್ ಪಡೆದರೆ, ಅಯಬೊಂಗ ಖಾಕ ಹಾಗೂ ನಾಯಕಿ ಸ್ಯುನ್ ಲುಸ್ ತಲಾ 1 ವಿಕೆಟ್ ಪಡೆದರು.

ಭಾರತ ಗಳಿಸಿದ ಅಲ್ಪ ಮೊತ್ತವು ಗೆಲುವಿಗೆ ಸಾಕಾಗಲಿಲ್ಲ. ಭಾರತದ ಬೌಲರ್‌ಗಳ ಪ್ರಯತ್ನಕ್ಕೆ ಜಯದ ಫಲ ಸಿಗಲಿಲ್ಲ. ದೀಪ್ತಿ ಶರ್ಮಾ, ಸ್ನೇಹಾ ರಾಣಾ ಹಾಗೂ ರಾಜೇಶ್ವರಿ ಗಾಯಕವಾಡ ಅವರು ಉತ್ತಮ ಬೌಲಿಂಗ್ ಮಾಡಿದರು. ಅದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 47ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಆದರೆ ಈ ಹಂತದಲ್ಲಿ ಏಕಾಂಗಿ ಹೋರಾಟ ಮಾಡಿದ ಐದನೇ ಕ್ರಮಾಂಕದ ಶ್ಲೊಯೆ ಟ್ರಯಾನ್ ತಂಡಕ್ಕೆ ಗೆಲುವು ತಂದುಕೊಟ್ಟರು. ಟ್ರಯಾನ್ ಕೇವಲ 32 ಎಸೆತಗಳಲ್ಲಿ 6 ಫೋರ್, 2 ಸಿಕ್ಸರ್ನೊಂದಿಗೆ ಅಜೇಯ 57 ರನ್ ಚಚ್ಚಿದರು.

ದಕ್ಷಿಣ ಆಫ್ರಿಕಾ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿತು. ಭಾರತ ಪರ ಸ್ನೇಹ್ ರಾಣ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ರಾಜೇಶ್ವರಿ ಹಾಗೂ ರೇಣುಕಾ ಸಿಂಗ್ ತಲಾ 1 ವಿಕೆಟ್ ಪಡೆದರು.