
ಟಿ20 ಕ್ರಿಕೆಟ್ನಲ್ಲಿ ಸ್ಪೇನ್ನ ಮುಹಮ್ಮದ್ ಇಹ್ಸಾನ್ (Muhammad Ihsan) ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಸ್ಫೋಟಕ ಸೆಂಚುರಿಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ 2 ಶತಕಗಳನ್ನು ಬಾರಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಇಹ್ಸಾನ್ ತನ್ನದಾಗಿಸಿಕೊಂಡಿದ್ದಾರೆ.

ಮುರ್ಷಿಯಾದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಪೇನ್ ಹಾಗೂ ಕ್ರೊವೆಷಿಯಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸ್ಪೇನ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಹಮ್ಮದ್ ಇಹ್ಸಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಮುಹಮ್ಮದ್ ಇಹ್ಸಾನ್ ಶತಕ ಪೂರೈಸಲು ತೆಗೆದುಕೊಂಡಿದ್ದು ಕೇವಲ 41 ಎಸೆತಗಳನ್ನು ಮಾತ್ರ. ಇನ್ನು ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಎಹ್ಸಾನ್ 63 ಎಸೆತಗಳಲ್ಲಿ ಬರೋಬ್ಬರಿ 17 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 160 ಬಾರಿಸಿದರು.

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ 2 ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಬರೆದಿದ್ದು ಸಮೋವಾ ತಂಡದ ಡೇರಿಯಸ್ ವಿಸ್ಸರ್. 2024 ರಲ್ಲಿ ವನವಾಟು ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಟಿ20 ಶತಕಗಳನ್ನು ಬಾರಿಸಿದ್ದರು. ಇದೀಗ ಕ್ರೊವೆಷಿಯಾ ವಿರುದ್ಧದ ಸರಣಿಯಲ್ಲಿ ಇಹ್ಸಾನ್ 112 ಹಾಗೂ 160 ರನ್ಗಳ ಇನಿಂಗ್ಸ್ ಆಡುವ ಮೂಲಕ ಈ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇನ್ನು ಮುಹಮ್ಮದ್ ಇಹ್ಸಾನ್ ಬಾರಿಸಿದ 160 ರನ್ಗಳ ನೆರವಿನೊಂದಿಗೆ ಸ್ಪೇನ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 290 ರನ್ ಕಲೆಹಾಕಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲಾದ 6ನೇ ಗರಿಷ್ಠ ಸ್ಖೋರ್ ಎಂಬುದು ವಿಶೇಷ.

ಇನ್ನು 291 ರನ್ಗಳ ಗುರಿ ಬೆನ್ನತ್ತಿದ ಕ್ರೊವೆಷಿಯಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 78 ರನ್ಗಳು ಮಾತ್ರ. ಈ ಮೂಲಕ ಸ್ಪೇನ್ ತಂಡವು 215 ರನ್ಗಳ ಅಮೋಘ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.