
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಈ ಗೆಲುವುಗಳೊಂದಿಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ಬರೆದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ 3ನೇ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೊಹ್ಲಿಯನ್ನು ಸೂರ್ಯ ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 52 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ವೇಳೆ 32 ಮ್ಯಾಚ್ಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಇನ್ನು 18 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತರೆ, 2 ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು. ಹಾಗೆಯೇ ಎರಡು ಪಂದ್ಯಗಳು ರದ್ದಾಗಿದ್ದವು.

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಒಟ್ಟು 41 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಬರೋಬ್ಬರಿ 33 ಪಂದ್ಯಗಳಲ್ಲಿ. ಅಲ್ಲದೆ ಸೋತಿರುವುದು ಕೇವಲ 6 ಮ್ಯಾಚ್ಗಳಲ್ಲಿ ಮಾತ್ರ. ಇನ್ನು 2 ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾಗಿದ್ದವು.

ಇನ್ನು ಭಾರತ ಟಿ20 ತಂಡದ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, ಮಹೇಂದ್ರ ಸಿಂಗ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಧೋನಿ 72 ಪಂದ್ಯಗಳಲ್ಲಿ 41 ಗೆಲುವು ತಂದುಕೊಟ್ಟಿದ್ದಾರೆ. ಅತ್ತ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ 62 ಟಿ20 ಪಂದ್ಯಗಳನ್ನಾಡಿದ್ದ ಟೀಮ್ ಇಂಡಿಯಾ 50 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.