
ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿದೆ. ಆ ಬಳಿಕ ಇಡೀ ವಿಶ್ವವೇ ಕಾಯುತ್ತಿರುವ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಚುಟುಕು ಸಮರ ಜೂನ್ 2 ರಿಂದ ಆರಂಭವಾಗಲಿದೆ. ಮೊದಲ ಬಾರಿಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಈ ಟೂರ್ನಿಗೆ ಆತಿಥ್ಯವಹಿಸುತ್ತಿವೆ.

ಅಮೇರಿಕಾದಲ್ಲಿ ಕ್ರಿಕೆಟ್ ಸಾಮ್ರಾಜ್ಯ ಸ್ಥಾಪಿಸುವ ಸಲುವಾಗಿ ಐಸಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಪ್ರಯುಕ್ತ ಇದೀಗ ತನ್ನ ವೇಗದ ಮೂಲಕ ಒಲಂಪಿಕ್ಸ್ನಲ್ಲಿ ಚಿನ್ನದ ಪದಕಗಳ ಭೇಟೆಯಾಡಿದ್ದ ಜಮೈಕಾದ ಶರ ವೇಗದ ಸರದಾರ ಉಸೇನ್ ಬೋಲ್ಟ್ ಅವರನ್ನು ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

8 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಏಪ್ರಿಲ್ 24 ಬುಧವಾರದಂದು ಟಿ20 ವಿಶ್ವಕಪ್ 2024 ರ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ರಾಯಭಾರಿಯಾಗಿ ನಾಮನಿರ್ದೇಶನವಾದ ಬಳಿಕ ಮಾತನಾಡಿದ ಬೋಲ್ಟ್, ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟೂರ್ನಿಗಳಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ. ಮುಂಬರುವ ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಲು ನಾನು ರೋಮಾಂಚನಗೊಂಡಿದ್ದೇನೆ.

ಕ್ರಿಕೆಟ್ ಜೀವನದ ಭಾಗವಾಗಿರುವ ಕೆರಿಬಿಯನ್‌ನಿಂದ ಬಂದ ನನ್ನ ಹೃದಯದಲ್ಲಿ ಈ ಆಟವು ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿದೆ. ಇಂತಹ ಪ್ರತಿಷ್ಠಿತ ಪಂದ್ಯಾವಳಿಯ ಭಾಗವಾಗಿರುವುದು ನನಗೆ ಗೌರವವಾಗಿದೆ ಎಂದಿದ್ದಾರೆ.

ಇನ್ನು ಟಿ20 ವಿಶ್ವಕಪ್ ವಿಚಾರಕ್ಕೆ ಬರುವುದಾದರೆ.. ಲೀಗ್ನ ಮೊದಲ ದಿನ 2 ಪಂದ್ಯಗಳು ನಡೆಯಲಿವೆ. ಭಾರತ ತಂಡ ಜೂನ್ 5 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
Published On - 8:47 pm, Wed, 24 April 24