
2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಪಂದ್ಯಾವಳಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆದಾಗ್ಯೂ, ಪಂದ್ಯಾವಳಿಗೂ ಮುನ್ನವೇ ಒಂದು ದೊಡ್ಡ ವಿವಾದ ಭುಗಿಲೆದ್ದಿದೆ. ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬರುವುದಿಲ್ಲ ಎನ್ನುತ್ತಿದ್ದು, ತನ್ನೇಲ್ಲ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಕೇಳಿಕೊಂಡಿದೆ. ಆದರೆ ಐಸಿಸಿ ಹಾಗೂ ಬಿಸಿಸಿಐ ಮಾತ್ರ ಬಾಂಗ್ಲಾದೇಶ ಬೇಡಿಕೆಯನ್ನು ತಿರಸ್ಕರಿಸಿವೆ.

ಈಗ ಪ್ರಶ್ನೆಯೆಂದರೆ, ಅಂತಿಮವಾಗಿ ಎಲ್ಲಾ ಪ್ರಯತ್ನಗಳು ನಡೆದ ಬಳಿಕವೂ ಐಸಿಸಿ, ಬಾಂಗ್ಲಾದೇಶದ ಬೇಡಿಕೆಯನ್ನು ಸ್ವೀಕರಿಸದಿದ್ದರೆ, ಇತ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿದ್ದರೆ ಏನಾಗುತ್ತದೆ? ಎಂಬುದು. ಐಸಿಸಿ ಹೇಳಿದಂತೆ ಬಾಂಗ್ಲಾ ಕೇಳದಿದ್ದರೆ, ಅದನ್ನು ಟಿ 20 ವಿಶ್ವಕಪ್‌ನಿಂದ ಹೊರಹಾಕಲಾಗುತ್ತದೆ. ಇದು ನಡೆದರೆ ಬಾಂಗ್ಲಾದೇಶ ತಂಡದ ಬದಲು ಬೇರೆ ತಂಡಕ್ಕೆ ಟಿ20 ವಿಶ್ವಕಪ್ ಆಡುವ ಅವಕಾಶ ಸಿಗಲಿದೆ. ಹಾಗಿದ್ದರೆ ಆ ತಂಡ ಯಾವುದು?

ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಿಂದ ಹೊರಗುಳಿದರೆ, ಆ ತಂಡಕ್ಕೆ ಬದಲಿಯಾಗಿ ಯಾವ ತಂಡ ಆಡಲಿದೆ ಎಂಬುದನ್ನು ಐಸಿಸಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಬಾಂಗ್ಲಾದೇಶ ತಂಡ ಹೊರಬಿದ್ದರೆ, ಆ ತಂಡದ ಬದಲಿಗೆ ಯಾವ ತಂಡ ಬರಲಿದೆ ಎಂಬುದರ ಬಗ್ಗೆ ಐಸಿಸಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಆದರೆ ಟೂರ್ನಿಯಲ್ಲಿ ಬಾಂಗ್ಲಾದೇಶ ಯಾವ ತಂಡಗಳನ್ನು ಎದುರಿಸಬೇಕಾಗಿತ್ತೋ ಆ ತಂಡಕ್ಕೆ ವಾಕ್‌ಓವರ್‌ಗಳನ್ನು ನೀಡುವ ಸಾಧ್ಯತೆಗಳಿವೆ.

ಇದರ ಜೊತೆಗೆ ಇತ್ತೀಚಿನ ಅರ್ಹತಾ ಪಂದ್ಯಗಳು, ಶ್ರೇಯಾಂಕಗಳು ಮತ್ತು ಸಿದ್ಧತೆಯ ಆಧಾರದ ಮೇಲೆಯೂ ಐಸಿಸಿ ಬೇರೆ ತಂಡಗಳಿಗೆ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಬದಲು ಆಡುವ ಅವಕಾಶವನ್ನು ನೀಡಬಹುದು. ಈ ಪ್ರಕಾರ, ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದರೆ, ಸ್ಕಾಟ್ಲೆಂಡ್ ಆಡುವ ಅವಕಾಶ ಪಡೆಯಬಹುದು.

ಏಕೆಂದರೆ ಸ್ಕಾಟ್ಲೆಂಡ್ ಈ ಹಿಂದೆ ಐಸಿಸಿ ಪಂದ್ಯಾವಳಿಗಳಿಗೆ ಅರ್ಹತೆ ಪಡೆದಿತ್ತು. ಯುರೋಪಿಯನ್ ಅರ್ಹತಾ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಇತ್ತೀಚಿನ ಫಲಿತಾಂಶಗಳ ಆಧಾರದ ಮೇಲೆ ಸ್ಕಾಟ್ಲೆಂಡ್‌ಗೆ ಆಡುವ ಅವಕಾಶ ಸಿಗಬಹುದು. ಈ ಹಿಂದೆ 2009 ರ ಟಿ20 ವಿಶ್ವಕಪ್‌ನಿಂದ ಜಿಂಬಾಬ್ವೆ ಹಿಂದೆ ಸರಿದಿತ್ತು. ಆ ಸಮಯದಲ್ಲಿಯೂ ಸ್ಕಾಟ್ಲೆಂಡ್‌ಗೆ ಟಿ20 ವಿಶ್ವಕಪ್ ಆಡುವ ಅವಕಾಶ ಸಿಕ್ಕಿತ್ತು.