
T20 World Cup 2026: ಟಿ20 ವಿಶ್ವಕಪ್ 2026ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನ ಮಾರ್ಚ್ 8 ರಂದು ಮುಗಿಯಲಿದೆ. ಅಂದರೆ ಬರೋಬ್ಬರಿ 29 ದಿನಗಳ ಕಾಲ ಟಿ20 ವಿಶ್ವಕಪ್ ಟೂರ್ನಮೆಂಟ್ ನಡೆಯಲಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ 20 ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹೀಗಾಗಿಯೇ ಈ ಬಾರಿ ಟೂರ್ನಿ ಹೇಗಿರಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

20 ತಂಡಗಳನ್ನು 4 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿ ಗ್ರೂಪ್ಗಳಲ್ಲಿ 5 ತಂಡಗಳಿವೆ. ಈ ಐದು ತಂಡಗಳ ನಡುವೆ ಮೊದಲ ಸುತ್ತಿನ ಪಂದ್ಯಗಳು ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿ ಇರುವ ಭಾರತ ತಂಡವು ಯುಎಸ್ಎ, ನಮೀಬಿಯಾ ಪಾಕಿಸ್ತಾನ್ ಮತ್ತು ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ರೀತಿಯಲ್ಲಿ ಎಲ್ಲಾ ತಂಡಗಳು ತಮ್ಮ ಗ್ರೂಪ್ಗಳಲ್ಲಿರುವ ತಂಡಗಳ ವಿರುದ್ಧ ತಲಾ 4 ಮ್ಯಾಚ್ಗಳನ್ನಾಡಲಿದೆ.

ಇಲ್ಲಿ ಎಲ್ಲಾ ಗ್ರೂಪ್ಗಳಿಗೂ ಭಿನ್ನ ಅಂಕ ಪಟ್ಟಿ ಇರಲಿದೆ. ಈ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಗ್ರೂಪ್-2 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಒಮಾನ್, ಐರ್ಲೆಂಡ್, ಝಿಂಬಾಬ್ವೆ ತಂಡಗಳಿವೆ. ಈ ತಂಡಗಳಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಎರಡು ತಂಡಗಳು ಗ್ರೂಪ್-2 ರ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ. ಹೀಗೆ ಎಲ್ಲಾ ಗ್ರೂಪ್ಗಳ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ಎಲ್ಲಾ ಟೀಮ್ಗಳು ಮುಂದಿನ ಹಂತಕ್ಕೇರಲಿದೆ.

ಎಲ್ಲಾ ಗ್ರೂಪ್ಗಳಿಂದ ತಲಾ 2 ತಂಡಗಳಂತೆ ಒಟ್ಟು 8 ಟೀಮ್ಗಳು ದ್ವಿತೀಯ ಸುತ್ತಿಗೆ ಪ್ರವೇಶಿಸುತ್ತದೆ. ಅದರಂತೆ ದ್ವಿತೀಯ ಸುತ್ತಿನಲ್ಲಿ ಒಟ್ಟು 8 ತಂಡಗಳು ಒಂದೇ ಗ್ರೂಪ್ನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿಯೇ ಈ ಸುತ್ತನ್ನು ಸೂಪರ್-8 ರೌಂಡ್ ಎಂದು ಕರೆಯಲಾಗುತ್ತದೆ. ಸೂಪರ್-8 ಸುತ್ತಿನಲ್ಲಿ ಒಂದೇ ಪಾಯಿಂಟ್ಸ್ ಟೇಬಲ್ ಇರಲಿದ್ದು, ಈ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್ಗೇರಲಿದೆ.

ಅದರಂತೆ ಸೆಮಿಫೈನಲ್ನಲ್ಲಿ ಒಟ್ಟು ನಾಲ್ಕು ತಂಡಗಳು ಕಾಣಿಸಿಕೊಳ್ಳಲಿದೆ. ಇಲ್ಲಿ ಸೂಪರ್-8 ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ತಂಡವು ನಾಲ್ಕನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಹಾಗೆಯೇ ಸೂಪರ್-8 ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ತಂಡ ಮೂರನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

ಮೊದಲ ಸೆಮಿಫೈನಲ್ ಪಂದ್ಯವು ಮಾರ್ಚ್ 4 ರಂದು ನಡೆಯಲಿದ್ದು, ದ್ವಿತೀಯ ಸೆಮಿಫೈನಲ್ ಪಂದ್ಯವು ಮಾರ್ಚ್ 5 ರಂದು ಜರುಗಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ. ಅದರಂತೆ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್ ಅಥವಾ ಕೊಲಂಬೊದಲ್ಲಿ ನಡೆಯಲಿದೆ.