
ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯವು ಟೀಮ್ ಇಂಡಿಯಾ ಪ್ರೇಮಿಗಳಿಗೆ ತುಂಬಾ ವಿಶೇಷ.

ಏಕೆಂದರೆ ಟೀಮ್ ಇಂಡಿಯಾದ ದಿಗ್ಗಜರಿಲ್ಲದೇ 15 ವರ್ಷಗಳ ಬಳಿಕ ಭಾರತ ತಂಡ ತವರಿನಲ್ಲಿ ಟೆಸ್ಟ್ ಪಂದ್ಯವಾಡುತ್ತಿದೆ. ಅಂದರೆ ಕಳೆದ 15 ವರ್ಷಗಳಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಿಲ್ಲದೇ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವಾಡಿರಲಿಲ್ಲ.

ಕಳೆದ 15 ವರ್ಷಗಳಲ್ಲಿ ನಡೆದ ಪ್ರತಿಯೊಂದು ತವರು ಟೆಸ್ಟ್ ಪಂದ್ಯದಲ್ಲೂ, ಈ ಮೂವರು ಆಟಗಾರರಲ್ಲಿ ಕನಿಷ್ಠ ಒಬ್ಬರು ಕಣಕ್ಕಿಳಿದಿದ್ದಾರೆ. ಇದೀಗ ಟೀಮ್ ಇಂಡಿಯಾದ ದಿಗ್ಗಜರು ನಿವೃತ್ತಿ ಘೋಷಿಸಿ ಟೆಸ್ಟ್ ಕ್ರಿಕೆಟ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಬಾರಿಯ ತವರು ಟೆಸ್ಟ್ ಪಂದ್ಯದಲ್ಲಿ ಈ ಮೂವರು ಕಾಣಿಸಿಕೊಂಡಿಲ್ಲ.

ಇದಕ್ಕೂ ಮುನ್ನ, ನವೆಂಬರ್ 2010 ರಲ್ಲಿ ನಾಗ್ಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಕೊನೆಯ ಬಾರಿ ಮೂವರು ದಿಗ್ಗಜರಿಲ್ಲದೇ ಕಣಕ್ಕಿಳಿದಿತ್ತು. ಆ ಬಳಿಕ ತವರಿನಲ್ಲಿ ನಡೆದ ಪ್ರತಿ ಟೆಸ್ಟ್ನಲ್ಲೂ ರೋಹಿತ್ ಶರ್ಮಾ, ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ... ಇವರಲ್ಲಿ ಒಬ್ಬರು ಕಣಕ್ಕಿಳಿಯದೇ ಟೀಮ್ ಇಂಡಿಯಾ ಪಂದ್ಯವಾಡಿಲ್ಲ. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಭಾರತ ತಂಡವು ಮೂವರು ದಿಗ್ಗಜರಿಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿರುವುದು ವಿಶೇಷ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ಗೆ ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Published On - 9:55 am, Thu, 2 October 25