
ಇಂದೋರ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತು. ಆಸೀಸ್ ಸ್ಪಿನ್ ದಾಳಿಗೆ ತಬ್ಬಿಬ್ಬಾದ ಭಾರತೀಯ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಪರಿಣಾಮ ಕಾಂಗರೂ ಪಡೆ 9 ವಿಕೆಟ್ಗಳಿಂದ ಗೆದ್ದು ಬೀಗಿತು.

ಇದೀಗ ಉಭಯ ತಂಡಗಳು ಅಹ್ಮದಾಬಾದ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಟೀಮ್ ಇಂಡಿಯಾ ಆಟಗಾರರು ಮೂರನೇ ಟೆಸ್ಟ್ನಲ್ಲಿ ಸೋಲು ಕಂಡ ಮೈದಾನದಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ.

ಅಹ್ಮದಾಬಾದ್ಗೆ ತೆರಳದೆ ಭಾರತೀಯ ಬ್ಯಾಟರ್ಗಳು, ಬೌಲರ್ಗಳು ಇಂದೋರ್ನಲ್ಲೇ ಕಠಿಣ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದು ಇವರಿಬ್ಬರನ್ನು ಹೊರತು ಪಡಿಸಿ ಉಳಿದವರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಶುಭಮನ್ ಗಿಲ್, ಶ್ರೀಕರ್ ಭರತ್, ಶ್ರೇಯಸ್ ಅಯ್ಯರ್ ಸಾಕಷ್ಟು ಅಭ್ಯಾಸ ಮಾಡಿದರು. ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಇವರ ಜೊತೆ ಸುದೀರ್ಘವಾದ ಸೆಷನ್ ನಡೆಸಿದರು.

ಸದ್ಯ ಭಾರತ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ 2-0 ಅಂತರದಿಂದ ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಉಳಿದಿರುವ ಒಂದು ಪಂದ್ಯವನ್ನು ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಏರಲಿದೆ.

ಇತ್ತ ಆಸೀಸ್ ಪಡೆಗೆ ಕೂಡ ಕೊನೆಯ ಟೆಸ್ಟ್ ಬಹುಮುಖ್ಯ. 1-2 ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾಕ್ಕೆ ಮಾನ ಉಳಿಸಿಕೊಳ್ಳಲು ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಬೇಕಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 9 ರಿಂದ ಮಾರ್ಚ್ 13 ರವರೆಗೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬೆಳಗ್ಗೆ 09:30 ಕ್ಕೆ ಆರಂಭವಾಗಲಿದೆ. ಒಂಬತ್ತು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.