
ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ (Team India) ಪಾರುಪತ್ಯ ಮುಂದುವರೆದಿದೆ. ಈ ಬಾರಿ ಭಾರತ ತಂಡದ ಪರಾಕ್ರಮಕ್ಕೆ ನಲುಗಿದ್ದು ನ್ಯೂಝಿಲೆಂಡ್ (New Zealand). ಅದು ಸಹ ಬರೋಬ್ಬರಿ 238 ರನ್ ಚಚ್ಚಿಸಿಕೊಳ್ಳುವ ಮೂಲಕ.

ನಾಗಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತದ ಪರ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 5 ಫೋರ್ ಗಳೊಂದಿಗೆ 84 ರನ್ ಚಚ್ಚಿದ್ದರು.

ಈ ವಿಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಬರೋಬ್ಬರಿ 238 ರನ್ ಕಲೆಹಾಕಿತು. ಈ 200 ರನ್ ಗಳೊಂದಿಗೆ ಭಾರತ ತಂಡದ ಇನ್ನೂರ ನಾಗಾಲೋಟ ಮುಂದುವರೆದಿದೆ.

ಅಂದರೆ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ 200+ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಈ ವಿಶ್ವ ದಾಖಲೆಯ ಇದೀಗ 44 ಕ್ಕೇರಿಸಿದ್ದಾರೆ. ಅಂದರೆ ಭಾರತ ತಂಡವು ಈವರೆಗೆ 44 ಬಾರಿ ಇನ್ನೂರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ, ಟೀಮ್ ಇಂಡಿಯಾವನ್ನು ಹೊರತುಪಡಿಸಿ ವಿಶ್ವದ ಯಾವುದೇ ತಂಡ 40ರ ಗಡಿ ಮುಟ್ಟಿಲ್ಲ. ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಸೌತ್ ಆಫ್ರಿಕಾ. ಆಫ್ರಿಕಾ ಪಡೆ ಈವರೆಗೆ 27 ಬಾರಿ ಮಾತ್ರ 200+ ರನ್ ಕಲೆಹಾಕಿದ್ದಾರೆ.

ಇತ್ತ ಟೀಮ್ ಇಂಡಿಯಾ ಇನ್ನೂರಕ್ಕಿಂತ ಅಧಿಕ ಸ್ಕೋರ್ ಗಳಿಸುವುದರಲ್ಲಿ ತನ್ನ ಪಾರುಪತ್ಯ ಮುಂದುವರೆಸಿದ್ದು, ಈ ಮೂಲಕ 200+ ಸ್ಕೋರ್ ಪಟ್ಟಿಯಲ್ಲಿ ಅರ್ಧಶತಕ ಪೂರೈಸಲು ದಾಪುಗಾಲಿಟ್ಟಿದೆ.