
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದ ಪಂತ್ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿದೆ.

ಇತ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ರಿಷಭ್ ಪಂತ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ನವೆಂಬರ್ 1 ರಂದು ನಡೆಯಲಿರುವ ರಣಜಿ ಟೂರ್ನಿಯ ಪಂದ್ಯದಲ್ಲಿ ಕಣಕ್ಕಿಳಿದರೆ ಮಾತ್ರ ಪಂತ್ ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.

ನವೆಂಬರ್ 1 ರಂದು ದೆಹಲಿ ಹಾಗು ಪುದುಚೇರಿ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ರಿಷಭ್ ಪಂತ್ ದೆಹಲಿ ಪರ ಕಣಕ್ಕಿಳಿದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಪರಿಗಣಿಸಲಾಗುತ್ತದೆ. ಹೀಗಾಗಿ ಅದಕ್ಕೂ ಮುನ್ನ ಪಂತ್ ಮತ್ತೆ ಮೈದಾನಕ್ಕಿಳಿಯುವ ಇರಾದೆಯಲ್ಲಿದ್ದಾರೆ.

ಅಂದರೆ ಅಕ್ಟೋಬರ್ 15 ರಿಂದ ರಣಜಿ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ರಿಷಭ್ ಪಂತ್ ದೆಹಲಿ ಪರ ಕಣಕ್ಕಿಳಿಯಲು ಅವಕಾಶವಿದೆ. ಅದರಂತೆ ಅಕ್ಟೋಬರ್ 25 ರಂದು ನಡೆಯಲಿರುವ ದೆಹಲಿ ಹಾಗೂ ಹಿಮಾಚಲ ಪ್ರದೇಶ್ ನಡುವಣ ಪಂದ್ಯದ ಮೂಲಕ ಅಥವಾ ನವೆಂಬರ್ 1 ರಂದು ಆರಂಭವಾಗಲಿರುವ ದೆಹಲಿ ಹಾಗೂ ಪುದುಚೇರಿ ನಡುವಿನ ಮ್ಯಾಚ್ ಮೂಲಕ ರಿಷಭ್ ಪಂತ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು.

ಹೀಗೆ ಸಂಪೂರ್ಣ ಫಿಟ್ನೆಸ್ ಸಾಧಿಸಿರುವುದನ್ನು ಸಾಬೀತುಪಡಿಸಿದರೆ ಮಾತ್ರ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಲಿದ್ದಾರೆ. ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ಸರಣಿಯು ನವೆಂಬರ್ 14 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.
Published On - 8:55 am, Wed, 8 October 25