
ಟೆಸ್ಟ್ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba Bavuma) ಹೊಸ ಇತಿಹಾಸ ರಚಿಸಿದ್ದಾರೆ. ಅದು ಕೂಡ ಸೋಲಿಲ್ಲದ ಸರದಾರನಾಗಿ ಎಂಬುದು ವಿಶೇಷ. ಅಂದರೆ ಬವುಮಾ ಟೆಸ್ಟ್ ತಂಡದ ನಾಯಕತ್ವವಹಿಸಿದ ಬಳಿಕ ಸೌತ್ ಆಫ್ರಿಕಾ ತಂಡ ಒಂದೇ ಒಂದು ಸೋಲು ಕಂಡಿಲ್ಲ. ಇದುವೇ ಹೊಸ ವಿಶ್ವ ದಾಖಲೆ.

ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಮೊದಲ 10 ಪಂದ್ಯಗಳಲ್ಲಿ ಅತ್ಯಧಿಕ ಗೆಲುವು ಕಂಡ ನಾಯಕನೆಂಬ ವಿಶ್ವ ದಾಖಲೆ ಪೆರ್ಸಿ ಚಾಪ್ಮ್ಯಾನ್ ಹೆಸರಿನಲ್ಲಿತ್ತು. 1926 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಚಾಪ್ಮ್ಯಾನ್ ಮೊದಲ 10 ಪಂದ್ಯಗಳಲ್ಲಿ 9 ಗೆಲುವು ತಂದುಕೊಟ್ಟಿದ್ದರು. ಇದೇ ವೇಳೆ ಒಂದು ಪಂದ್ಯದಲ್ಲಿ ಮಾತ್ರ ಇಂಗ್ಲೆಂಡ್ ತಂಡ ಸೋಲನುಭವಿಸಿತ್ತು.

ಇದೀಗ ಪೆರ್ಸಿ ಚಾಪ್ಮ್ಯಾನ್ ಹೆಸರಿನಲ್ಲಿದ್ದ ಈ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ಮುರಿದಿದ್ದಾರೆ. ಅದು ಕೂಡ 99 ವರ್ಷಗಳ ಬಳಿಕ ಎಂಬುದು ವಿಶೇಷ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು 10 ಪಂದ್ಯಗಳಲ್ಲಿ ಮುನ್ನಡೆಸಿರುವ ಬವುಮಾ ಒಟ್ಟು 9 ಗೆಲುವು ಕಂಡಿದ್ದಾರೆ. ಇನ್ನು ಒಂದು ಪಂದ್ಯದಲ್ಲಿ ಸೌತ್ ಆಫ್ರಿಕಾ ಡ್ರಾ ಸಾಧಿಸಿದೆ.

ಅಂದರೆ ಟೆಂಬಾ ಬವುಮಾ ಮುನ್ನಡೆಸಿರುವ 10 ಟೆಸ್ಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡವು ಒಂದೇ ಒಂದು ಸೋಲು ಕಂಡಿಲ್ಲ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಹತ್ತು ಪಂದ್ಯಗಳಲ್ಲಿ ಸೋಲು ಕಾಣದ ಮೊದಲ ನಾಯಕನೆಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಸೋಲು ಕಾಣದೇ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಟೆಂಬಾ ಬವುಮಾ ಪಾತ್ರರಾಗಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದಂತಹ ದಾಖಲೆಗಳನ್ನು ನಿರ್ಮಿಸುವ ಮೂಲಕ ಬವುಮಾ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.