
ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಉಸ್ಮಾನ್ ಖ್ವಾಜಾ (USAMAN KHAWAJA) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸಿಡ್ನಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದೊಂದಿಗೆ ಖ್ವಾಜಾ 15 ವರ್ಷಗಳ ಇಂಟರ್ನ್ಯಾಷನಲ್ ಕೆರಿಯರ್ ಅಂತ್ಯಗೊಳಿಸಿದ್ದಾರೆ.

2011 ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ಖ್ವಾಜಾ ಇದೀಗ ಅದೇ ಮೈದಾನದಲ್ಲಿ ಕೊನೆಯ ಮ್ಯಾಚ್ ಆಡಿದ್ದಾರೆ. ಅದು ಇಂಗ್ಲೆಂಡ್ ವಿರುದ್ಧ ಎಂಬುದು ವಿಶೇಷ. ಅಂದರೆ 2011ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೂಲಕ ಖ್ವಾಜಾ ಟೆಸ್ಟ್ ಕೆರಿಯರ್ ಆರಂಭಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.

15 ವರ್ಷಗಳ ಟೆಸ್ಟ್ ಕೆರಿಯರ್ನಲ್ಲಿ ಆಸ್ಟ್ರೇಲಿಯಾ ಪರ 88 ಪಂದ್ಯಗಳನ್ನಾಡಿರುವ ಉಸ್ಮಾನ್ ಖ್ವಾಜಾ 159 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 1 ದ್ವಿಶತಕ, 16 ಶತಕ ಹಾಗೂ 28 ಅರ್ಧಶತಕಗಳು ಮೂಡಿಬಂದಿವೆ. ಅಲ್ಲದೆ ಒಟ್ಟು 6229 ರನ್ ಕಲೆಹಾಕಿದ್ದಾರೆ.

ಟೆಸ್ಟ್ ಅಲ್ಲದೆ ಉಸ್ಮಾನ್ ಖ್ವಾಜಾ ಆಸ್ಟ್ರೇಲಿಯಾ ಪರ 40 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ಶತಕ ಹಾಗೂ 12 ಅರ್ಧಶತಕಗಳೊಂದಿಗೆ ಒಟ್ಟು 1554 ರನ್ ಕಲೆಹಾಕಿದ್ದಾರೆ. ಹಾಗೆಯೇ 9 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಂದು ಅರ್ಧಶತಕದೊಂದಿಗೆ 182 ರನ್ ಕಲೆಹಾಕಿದ್ದಾರೆ.

ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಉಸ್ಮಾನ್ ಖ್ವಾಜಾ ಕಾಣಿಸಿಕೊಂಡಿದ್ದರು. 2016ರ ಐಪಿಎಲ್ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ಪರ 6 ಪಂದ್ಯಗಳನ್ನಾಡಿರುವ ಖ್ವಾಜಾ 127 ರನ್ ಕಲೆಹಾಕಿದ್ದರು. ಇದಾದ ಬಳಿಕ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ 39ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.