
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಕಡಿಮೆ ಅವಧಿಯಲ್ಲೇ ಚುಟುಕು ಮಾದರಿಯಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರ ಫಲವಾಗಿ ಐಸಿಸಿ ಟಿ20 ಶ್ರೇಯಾಂಕದಲ್ಲಿಯೂ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ.

ಡಿಸೆಂಬರ್ 17 ರ ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿ ವರುಣ್ ಚಕ್ರವರ್ತಿ ಮುಂದುವರೆದಿದ್ದಾರೆಯಾದರೂ ರೇಟಿಂಗ್ನಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಟಿ20 ಪಂದ್ಯಗಳಲ್ಲಿ ಚಕ್ರವರ್ತಿ ತಲಾ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಫಲವಾಗಿ ಅವರಿಗೆ 36 ರೇಟಿಂಗ್ ಅಂಕಗಳು ಹೆಚ್ಚುವರಿಯಾಗಿ ಸಿಕ್ಕಿವೆ.

ಇದರಿಂದಾಗಿ 818 ರೇಟಿಂಗ್ ಪಾಯಿಂಟ್ ತಲುಪಿರುವ ವರುಣ್ ಚಕ್ರವರ್ತಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 818 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.

2017 ರಲ್ಲಿ 783 ರೇಟಿಂಗ್ ಪಾಯಿಂಟ್ನೊಂದಿಗೆ ಜಸ್ಪ್ರೀತ್ ಬುಮ್ರಾ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಇದೀಗ ವರುಣ್ 800 ಅಂಕಗಳ ಗಡಿಯನ್ನು ದಾಟಿದ್ದಾರೆ. ಈ ಮೂಲಕ ವರುಣ್ ಚಕ್ರವರ್ತಿ ಟಾಪ್ -10 ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಪ್ರಸ್ತುತ ಐಸಿಸಿ ಟಿ20 ಶ್ರೇಯಾಂಕದಲ್ಲಿ ವರುಣ್ ಚಕ್ರವರ್ತಿ ನಂತರದಲ್ಲಿರುವ ನ್ಯೂಜಿಲೆಂಡ್‌ನ ಜಾಕೋಬ್ ಡಫಿ 699 ರೇಟಿಂಗ್ ಹೊಂದಿದ್ದಾರೆ. ಚಕ್ರವರ್ತಿ ಮತ್ತು ಡಫಿ ನಡುವೆ 119 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸವಿದೆ. ಪ್ರಸ್ತುತ ಟಿ20 ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿರುವ ಏಕೈಕ ಭಾರತೀಯ ಚಕ್ರವರ್ತಿ. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಸ್ತುತ ಸರಣಿಯಿಂದ ಹೊರಗುಳಿದಿರುವ ಅಕ್ಷರ್ ಪಟೇಲ್ 636 ರೇಟಿಂಗ್‌ನೊಂದಿಗೆ 13 ನೇ ಸ್ಥಾನದಲ್ಲಿದ್ದಾರೆ.