
ಕರ್ನಾಟಕದ ವೇಗಿ ವಾಸುಕಿ ಕೌಶಿಕ್ ಲಿಸ್ಟ್ ಎ (ಏಕದಿನ) ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ತನ್ನ ಕರಾರುವಾಕ್ ದಾಳಿ ಮೂಲಕ. ಈ ದಾಳಿಯೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಕಣಕ್ಕಿಳಿಯುತ್ತಿರುವ ವಾಸುಕಿ ಕೌಶಿಕ್ ಪಂಜಾಬ್ ವಿರುದ್ಧದ ವಿಜಯ ಹಝಾರೆ ಟೂರ್ನಿಯ ಪಂದ್ಯದಲ್ಲಿ 8 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಎಗರಿಸಿದ್ದರು. ಈ ಎರಡು ವಿಕೆಟ್‌ಗಳೊಂದಿಗೆ ವಾಸುಕಿ ವಿಂಡೀಸ್ ವೇಗಿಗಳ ವಿಶ್ವ ದಾಖಲೆ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

ಅಂದರೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 2500 ಕ್ಕಿಂತ ಹೆಚ್ಚಿನ ಎಸೆತಗಳನ್ನು ಎಸೆದು ಅತ್ಯುತ್ತಮ ಸರಾಸರಿ ಹೊಂದಿರುವ ವಿಶ್ವದ 2ನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ವಾಸುಕಿ ಕೌಶಿಕ್ ತಮ್ಮದಾಗಿಸಿಕೊಂಡಿದ್ದಾರೆ. ವಾಸುಕಿ ಈವರೆಗೆ 50 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2526 ಎಸೆತಗಳನ್ನು ಎಸೆದಿದ್ದಾರೆ.

ಈ 2526 ಎಸೆತಗಳಲ್ಲಿ 1576 ರನ್ ನೀಡಿ ವಾಸುಕಿ ಕೌಶಿಕ್ ಪಡೆದಿರುವುದು ಬರೋಬ್ಬರಿ 96 ವಿಕೆಟ್‌ಗಳು. ಅಂದರೆ ವಾಸುಕಿ 16.44ರ ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್‌ನ ಲೆಜೆಂಡ್ ಕೀತ್ ಡೇವಿಡ್ ಬಾಯ್ಸ್. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 164 ಪಂದ್ಯಗಳನ್ನಾಡಿರುವ ಕೀತ್ ಬಾಯ್ಸ್ 7833 ಎಸೆತಗಳಲ್ಲಿ 4304 ರನ್ ನೀಡಿ 16.05 ಸರಾಸರಿಯಲ್ಲಿ ಒಟ್ಟು 268 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ 16.44ರ ಸರಾಸರಿಯಲ್ಲಿ 96 ವಿಕೆಟ್ ಉರುಳಿಸಿ ಕರ್ನಾಟಕ ವೇಗಿ ವಾಸುಕಿ ಕೌಶಿಕ್ ಈ ವಿಶ್ವ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅಚ್ಚರಿ ಎಂದರೆ ದೇಶೀಯ ಅಂಗಳದಲ್ಲಿ ಇಂತಹದೊಂದು ಪರಾಕ್ರಮ ಮೆರೆದರೂ ವಾಸುಕಿ ಕೌಶಿಕ್ ಗೆ ಈವರೆಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿಲ್ಲ ಎಂಬುದು. ಇದೀಗ ವಿಶ್ವ ದಾಖಲೆಯೊಂದಿಗೆ ಸದ್ದು ಮಾಡಿರುವ ಕನ್ನಡಿಗನಿಗೆ ಇನ್ಮುಂದೆಯಾದರೂ ಭಾರತ ತಂಡದಲ್ಲಿ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.