
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿ ಮುಗಿದಿದೆ. ಇನ್ನು ಟೀಮ್ ಇಂಡಿಯಾದ ಸರಣಿ ಶುರುವಾಗುವುದು ಜನವರಿ 11 ರಿಂದ. ಅದಕ್ಕೂ ಮುನ್ನ ವಿರಾಟ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರ ಅಭಿಮಾನಿಗಳಿಗೆ ದೊರೆಯಲಿದೆ. ಅದು ಕೂಡ ಬೆಂಗಳೂರಿನಲ್ಲಿ.

ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನವೇ ಕಿಂಗ್ ಕೊಹ್ಲಿ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದ್ದಾರೆ. ಅದು ಕೂಡ ದೇಶೀಯ ಏಕದಿನ ಟೂರ್ನಿಯಲ್ಲಿ. ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿಯಲಿದ್ದಾರೆ.

ಈ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಹೀಗಾಗಿ ಡಿಸೆಂಬರ್ 24 ರಂದು ಶುರುವಾಗಲಿರುವ ದೆಹಲಿ ಮತ್ತು ಆಂಧ್ರ ನಡುವಣ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಮೂಲಕ ಕೊಹ್ಲಿ 15 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು. ಇದೀಗ 15 ವರ್ಷಗಳ ಬಳಿಕ ಮತ್ತೊಮ್ಮೆ ದೆಹಲಿ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

ವಿಜಯ ಹಝಾರೆ ಟೂರ್ನಿಗೆ ದೆಹಲಿ ತಂಡ: ರಿಷಭ್ ಪಂತ್, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ, ಅನೂಜ್ ರಾವತ್ (ಮೀಸಲು ಆಟಗಾರ).