
ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಯಾರು ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟರೆ, ಥಟ್ಟನೆ ಬರುವ ಉತ್ತರ ಮಹೇಂದ್ರ ಸಿಂಗ್ ಧೋನಿ. 200 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಧೋನಿ 110 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಂದರೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶೇ.59.52 ರಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಧೋನಿಯ ಬಳಿಕ ಟೀಮ್ ಇಂಡಿಯಾವನ್ನು 95 ಪಂದ್ಯಗಳಲ್ಲಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು 65 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇಲ್ಲಿ ಕೊಹ್ಲಿ ಸಾರಥ್ಯದಲ್ಲಿ ಟೀಮ್ ಇಂಡಿಯಾ 70.43 ರಷ್ಟು ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದೇ ವಿಶೇಷ. ಇದಾಗ್ಯೂ ಕಿಂಗ್ ಕೊಹ್ಲಿಯನ್ನು ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಪರಿಗಣಿಸಲಾಗುತ್ತಿಲ್ಲ ಎಂಬುದೇ ಅಚ್ಚರಿ. ಈ ಬಗ್ಗೆ ಖುದ್ದು ವಿರಾಟ್ ಕೊಹ್ಲಿ ಕೂಡ ಮಾತನಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, ತಮ್ಮನ್ನು ವಿಫಲ ನಾಯಕ ಎಂದು ಪರಿಗಣಿಸುತ್ತಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿದರೂ ನನ್ನನ್ನು ಯಶಸ್ವಿ ನಾಯಕನೆಂದು ಪರಿಗಣಿಸುತ್ತಿಲ್ಲ ಎಂಬ ಬೇಸರವನ್ನು ಹೊರಹಾಕಿದ್ದಾರೆ.

ಎಲ್ಲರೂ ಪಂದ್ಯಗಳನ್ನು ಗೆಲ್ಲಲೆಂದೇ ಆಡುತ್ತಾರೆ. ನನ್ನ ನಾಯಕತ್ವದಲ್ಲಿ ಟೀಮ್ ಇಂಡಿಯಾ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ತಲುಪಿದೆ. 2019 ರ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಿದ್ದೇವೆ. ಹಾಗೆಯೇ ನನ್ನ ಕ್ಯಾಪ್ಟನ್ಸಿ ಅಡಿಯಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಆಡಿದೆ. ಆದರೆ 2021 ರ ಟಿ20 ವಿಶ್ವಕಪ್ನಲ್ಲಿ ನಮ್ಮ ತಂಡ ನಾಕೌಟ್ಗೆ ತಲುಪಲು ವಿಫಲವಾಗಿತ್ತು. ಈ ಮೂರು ಐಸಿಸಿ ಟೂರ್ನಮೆಂಟ್ಗಳಲ್ಲಿ ನನ್ನ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪ್ರಮುಖ ಘಟ್ಟ ತಲುಪಿದರೂ, ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಲಾಯಿತು ಎಂದು ವಿರಾಟ್ ಕೊಹ್ಲಿ ಬೇಸರ ಹೊರಹಾಕಿದ್ದಾರೆ.

ಐಸಿಸಿ ಟ್ರೋಫಿ ಗೆಲ್ಲದ ಮಾತ್ರಕ್ಕೆ ಉತ್ತಮ ನಾಯಕನಲ್ಲ ಎಂದು ಹೇಳುವುದು ಸಮಂಜಸವಲ್ಲ. ಇಂತಹ ದೃಷ್ಟಿಕೋನದಿಂದ ನಾನು ಎಂದಿಗೂ ನನ್ನನ್ನು ಮೌಲ್ಯಮಾಪನ ಮಾಡಲಿಲ್ಲ. ನಾವು ತಂಡವಾಗಿ ಏನು ಸಾಧಿಸಿದ್ದೇವೆ ಎಂಬುದರ ಬಗ್ಗೆ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಪಂದ್ಯಾವಳಿಯು ನಿರ್ದಿಷ್ಟ ಅವಧಿಗೆ ಇರುತ್ತದೆ. ಆದರೆ, ಒಂದು ಪರಂಪರೆ ಹೆಚ್ಚು ಕಾಲ ಉಳಿಯುತ್ತದೆ. ಅದಕ್ಕಾಗಿ ಟೂರ್ನಿಗಳನ್ನು ಗೆಲ್ಲುವುದು ಮಾತ್ರ ದೊಡ್ಡ ವಿಷಯವಲ್ಲ ಎಂದು ಕೊಹ್ಲಿ ಹೇಳಿದರು.

ಒಬ್ಬ ಆಟಗಾರನಾಗಿ ನಾನು ಸಹ ವಿಶ್ವಕಪ್ ಗೆದ್ದಿದ್ದೇನೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿದ್ದೆ. ಐದು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡದ ಸದಸ್ಯನಾಗಿದ್ದೆ. ಆ ದೃಷ್ಟಿಯಿಂದ ನೋಡಿದರೆ...ವಿಶ್ವಕಪ್ ಗೆಲ್ಲದವರೂ ಇದ್ದಾರೆ. ನಿಜ ಹೇಳಬೇಕೆಂದರೆ, 2011 ರಲ್ಲಿ ನಾನು ವಿಶ್ವಕಪ್ ತಂಡದ ಭಾಗವಾಗಲು ಸಾಕಷ್ಟು ಅದೃಷ್ಟಶಾಲಿಯಾಗಿದ್ದೆ. ನಾನು ಉತ್ತಮ ಸ್ಕೋರ್ ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿರಾಟ್ ಕೊಹ್ಲಿ ಸ್ಮರಿಸಿದರು.

2011ರ ವಿಶ್ವಕಪ್ ಸಚಿನ್ ತೆಂಡೂಲ್ಕರ್ ಪಾಲಿನ 6ನೇ ವರ್ಲ್ಡ್ಕಪ್ ಆಗಿತ್ತು. ಆ ವಿಶ್ವಕಪ್ ಅನ್ನು ಭಾರತ ಗೆದ್ದುಕೊಂಡಿತು. ವಿಶೇಷ ಎಂದರೆ ನಾನು ಮೊದಲ ಬಾರಿಗೆ ವಿಶ್ವಕಪ್ ತಂಡದ ಭಾಗವಾಗಿದ್ದೆ. ಅದೇ ವಿಶ್ವಕಪ್ ಮೂಲಕ ನಾನು ವಿಜೇತ ತಂಡದ ಭಾಗವಾಗಿರುವುದು ವಿಶೇಷ.

ನನ್ನ ಇದುವರೆಗಿನ ವೃತ್ತಿಜೀವನದಲ್ಲಿ ಹಿಂತಿರುಗಿ ನೋಡಿದಾಗ, ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ಕೇವಲ ಪ್ರಶಸ್ತಿಗಾಗಿ ಆಡುವಷ್ಟು ನಾನು ಹುಚ್ಚನಲ್ಲ ಎಂಬುದು ಕೂಡ ಸಮಾಧಾನಕರ. ಒಟ್ಟಿನಲ್ಲಿ ನಾಯಕತ್ವ ಹಾಗೂ ವೃತ್ತಿಜೀವನವು ತುಂಬಾ ಖುಷಿ ನೀಡಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳು, 271 ಏಕದಿನ ಹಾಗೂ 115 ಟಿ20 ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ 25 ಸಾವಿರಕ್ಕೂ ಅಧಿಕ ರನ್ಗಳಿಸಿದ್ದಾರೆ. ವಿಶೇಷ ಎಂದರೆ ಅತ್ಯಂತ ವೇಗವಾಗಿ 25 ಸಾವಿರ ರನ್ ಕಲೆಹಾಕಿದ ಕ್ರಿಕೆಟಿಗ ಎಂಬ ವಿಶ್ವ ದಾಖಲೆ ಇದೀಗ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ.