
ಮಹಿಳಾ ಪ್ರೀಮಿಯರ್ ಲೀಗ್ 2026 ಟೂರ್ನಮೆಂಟ್‌ನಲ್ಲಿ ಈಗಾಗಲೇ 17 ಪಂದ್ಯಗಳು ಮುಗಿದಿವೆ. ಲೀಗ್ ಹಂತದಲ್ಲಿ ಇನ್ನೂ 3 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದಾಗ್ಯೂ ಆರ್‌ಸಿಬಿಯನ್ನು ಹೊರತುಪಡಿಸಿ ಬೇರೆ ಯಾವ ತಂಡವೂ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿಲ್ಲ. ಇದರರ್ಥ ಇನ್ನು ನಾಲ್ಕು ತಂಡಗಳು ಪ್ಲೇ ಆಫ್ ರೇಸ್‌ನಲ್ಲಿವೆ. ಹೀಗಾಗಿ ನಾಕೌಟ್ ಹಂತ ತಲುಪ ಬೇಕೆಂದರೆ 4 ತಂಡಗಳು ಉಳಿದ 3 ಪಂದ್ಯಗಳಲ್ಲಿ ಏನು ಮಾಡಬೇಕು ಎಂಬುದನ್ನು ನೋಡುವುದಾದರೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದು, 10 ಅಂಕ ಮತ್ತು +0.947 ರ ನೆಟ್ ರನ್ ರೇಟ್ನೊಂದಿಗೆ ಈಗಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆರ್‌ಸಿಬಿಯ ಕೊನೆಯ ಪಂದ್ಯ ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅದರ ನೇರ ಫೈನಲ್ ಪ್ರವೇಶದ ಬಾಗಿಲು ತೆರೆಯಲಿದೆ.

ಗುಜರಾತ್ ಜೈಂಟ್ಸ್ ಇದುವರೆಗೆ ಏಳು ಪಂದ್ಯಗಳನ್ನು ಆಡಿದ್ದು, 4 ಗೆಲುವಿನೊಂದಿಗೆ 8 ಅಂಕ ಮತ್ತು -0.271 ನೆಟ್ ರನ್ ರೇಟ್ ಹೊಂದಿದೆ. ಗುಜರಾತ್ ಜೈಂಟ್ಸ್ ತನ್ನ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯವನ್ನು ಗುಜರಾತ್ ಜೈಂಟ್ಸ್ ಗೆದ್ದರೆ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇತರೆ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.

ಮುಂಬೈ ಇಂಡಿಯನ್ಸ್ ತಂಡವು ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಮುಂಬೈ ತಂಡವು 6 ಅಂಕಗಳನ್ನು ಹೊಂದಿದ್ದು, +0.146 ನಿವ್ವಳ ರನ್ ರೇಟ್ ಹೊಂದಿದೆ. ಮುಂಬೈ ತಂಡದ ಕೊನೆಯ ಪಂದ್ಯ ಗುಜರಾತ್ ಜೈಂಟ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯವು ಮಾಡು ಇಲ್ಲವೇ ಮಡಿ ಹೋರಾಟವಾಗಿರುತ್ತದೆ. ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದರೆ ಸ್ಪರ್ಧೆಯಲ್ಲಿ ಉಳಿಯಲಿದೆ. ಸೋತರೆ ನಾಕೌಟ್ ಸುತ್ತಿನಿಂದ ಹೊರಗುಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಪರಿಸ್ಥಿತಿ ಮುಂಬೈ ಇಂಡಿಯನ್ಸ್‌ನಂತೆಯೇ ಇದೆ. ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ತಂಡದ ಬಳಿ 6 ಅಂಕಗಳಿದ್ದರೂ ಅದರ ನೆಟ್ ರನ್ ರೇಟ್ ಮುಂಬೈ ಇಂಡಿಯನ್ಸ್‌ಗಿಂತ ಕಡಿಮೆ ಇದೆ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವುದು ಮಾತ್ರವಲ್ಲದೆ ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ. ಡೆಲ್ಲಿ ರನ್ನ ಕೊನೆಯ ಪಂದ್ಯವನ್ನು ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ.

ಈ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ತಂಡವು ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಪಂದ್ಯಗಳನ್ನು ಗೆದ್ದು 4 ಪಂದ್ಯಗಳನ್ನು ಸೋತಿದೆ. ಹೀಗಾಗಿ ತಂಡವು 4 ಅಂಕ ಮತ್ತು -0.769 ನೆಟ್ ರನ್ ರೇಟ್ ಹೊಂದಿದೆ. ಯುಪಿ ವಾರಿಯರ್ಸ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ ರೇಸ್ನಲ್ಲಿ ಉಳಿಯಲಿದೆ, ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಯುಪಿ ವಾರಿಯರ್ಸ್‌ನ ಕೊನೆಯ ಎರಡು ಪಂದ್ಯಗಳು ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿವೆ.