
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬ್ಯಾಕ್ ಟು ಬ್ಯಾಕ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ ನೇರವಾಗಿ ಫೈನಲ್ಗೇರಲು ಒಂದು ಗೆಲುವಿನ ಅವಶ್ಯಕತೆಯಿದ್ದಾಗ ಸತತವಾಗಿ 2 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಈ ಸೋಲುಗಳ ಹೊರತಾಗಿಯೂ ಆರ್ಸಿಬಿ ತಂಡಕ್ಕೆ ನೇರವಾಗಿ ಫೈನಲ್ಗೇರಲು ಇನ್ನೊಂದು ಅವಕಾಶವಿದೆ. ಅದರಂತೆ ಇಂದು (ಜ.29) ನಡೆಯಲಿರುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಅಂಕಗಳೊಂದಿಗೆ ಫೈನಲ್ಗೆ ಅರ್ಹತೆ ಪಡೆಯಲಿದೆ.

ಒಂದು ವೇಳೆ ಸೋತರೆ?... ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ತಂಡ ಸೋತರೂ ಫೈನಲ್ಗೇರಲು ಉತ್ತಮ ಅವಕಾಶವಿದೆ, ಅದು ಸಹ ನೆಟ್ ರನ್ ರೇಟ್ ನೆರವಿನೊಂದಿಗೆ. ಏಕೆಂದರೆ ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.947 . ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊರತುಪಡಿಸಿ ಯಾವುದೇ ಟೀಮ್ ಉತ್ತಮ ನೆಟ್ ರನ್ ರೇಟ್ ಹೊಂದಿಲ್ಲ.

ಅದರಲ್ಲೂ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡ ಹೊಂದಿರುವುದು -0.271 ನೆಟ್ ರನ್ ರೇಟ್. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋತರೂ ಆರ್ಸಿಬಿ ತಂಡ ಅಗ್ರಸ್ಥಾನವನ್ನು ಕಾಯ್ದುಕೊಂಡು ಫೈನಲ್ಗೇರಬಹುದು. ಆದರೆ ಇಲ್ಲಿ ಆರ್ಸಿಬಿ ತಂಡದ ಯುಪಿ ವಾರಿಯರ್ಸ್ ವಿರುದ್ಧ ಹೀನಾಯವಾಗಿ ಸೋಲದಂತೆ ನೋಡಿಕೊಳ್ಳಬೇಕಿದೆ.

ಆರ್ಸಿಬಿ ತಂಡವು ಯುಪಿ ವಾರಿಯರ್ಸ್ ವಿರುದ್ಧ ಕನಿಷ್ಠ 60 ರನ್ಗಳ ಅಂತರದಿಂದ ಸೋತರೆ, ಅತ್ತ ಗುಜರಾತ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 160 ರನ್ಗಳ ಅಂತರದಿಂದ ಗೆಲ್ಲಬೇಕು. ಅಂದರೆ ಮಾತ್ರ ಆರ್ಸಿಬಿ ತಂಡವನ್ನು ಹಿಂದಿಕ್ಕಿ ನೆಟ್ ರನ್ ರೇಟ್ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ ಅಗ್ರಸ್ಥಾನಕ್ಕೇರಲು ಅವಕಾಶ ದೊರೆಯಲಿದೆ.

ಆದರೆ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡಕ್ಕೆ 160 ರನ್ಗಳ ಅಂತರದ ಗೆಲುವು ಕಷ್ಟಸಾಧ್ಯ. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋತರೂ ಆರ್ಸಿಬಿ ತಂಡ ನೆಟ್ ರನ್ ರೇಟ್ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಈ ಮೂಲಕ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.