
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ನ್ಯೂಝಿಲೆಂಡ್ ಶುಭಾರಂಭ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕಿವೀಸ್ ಪಡೆ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ನೂತನ ಅಂಕ ಪಟ್ಟಿ ಕೂಡ ಬಿಡುಗಡೆಯಾಗಿದೆ.

ನೂತನ ಅಂಕ ಪಟ್ಟಿಯಲ್ಲೂ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆಸೀಸ್ ಪಡೆ ಈವರೆಗೆ 6 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮ್ಯಾಚ್ಗಳಲ್ಲೂ ಜಯ ಸಾಧಿಸಿದೆ. ಈ ಮೂಲಕ 100 ಶೇಕಡಾವಾರಿನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ದ್ವಿತೀಯ ಸ್ಥಾನಕ್ಕೇರಿದೆ. ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಆಡಿದ 3 ಮ್ಯಾಚ್ಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾನೊಂದಿಗೆ 77.780 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಟೀಮ್ ಇಂಡಿಯಾವನ್ನು 2-0 ಅಂತರದಿಂದ ಸೋಲಿಸಿರುವ ಸೌತ್ ಆಫ್ರಿಕಾ ತಂಡ ಮೂರನೇ ಸ್ಥಾನದಲ್ಲಿದೆ. ಆಫ್ರಿಕಾ ಪಡೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ನಾಲ್ಕು ಮ್ಯಾಚ್ಗಳಲ್ಲಿ 3 ಜಯ ಸಾಧಿಸಿದೆ. ಈ ಮೂಲಕ 75 ಶೇಕಡಾವಾರಿನೊಂದಿಗೆ ಸೌತ್ ಆಫ್ರಿಕಾ ತಂಡ ತೃತೀಯ ಸ್ಥಾನವನ್ನು ಅಲಂಕರಿಸಿದೆ.

ಹಾಗೆಯೇ ಶ್ರೀಲಂಕಾ ತಂಡ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಂಕಾ ಪಡೆ ಕೂಡ ಈವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದ್ದು, ಈ ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಪಾಕಿಸ್ತಾನ್ ತಂಡ ಕಾಣಿಸಿಕೊಂಡಿದೆ. ಪಾಕ್ ಪಡೆ ಆಡಿರುವ 2 ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ 50 ಶೇಕಡಾವಾರು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಇನ್ನು ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು ಒಂದು ಡ್ರಾ ಸಾಧಿಸಿದೆ. ಇನ್ನುಳಿದ 4 ಮ್ಯಾಚ್ಗಳಲ್ಲೂ ಹೀನಾಯ ಸೋಲನುಭವಿಸಿದೆ. ಈ ಸೋಲು-ಗೆಲುವುಗಳೊಂದಿಗೆ 48.150 ಶೇಕಡಾವಾರು ಅಂಕ ಪಡೆದಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಆ್ಯಶಸ್ ಸರಣಿ ಸೋತಿರುವ ಇಂಗ್ಲೆಂಡ್ ತಂಡವು 27.080 ಶೇಕಡಾವಾರು ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಾಂಗ್ಲಾದೇಶ್ ತಂಡವು 16.67 ಶೇಕಡಾವಾರು ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ, 7 ಪಂದ್ಯಗಳನ್ನಾಡಿದ 7 ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡ 4.170 ಶೇಕಡಾವಾರು ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
Published On - 1:58 pm, Mon, 22 December 25