
ಆಂಗ್ಲರ ನಾಡಿನಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi jaiswal)ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 58 ವರ್ಷಗಳ ಬಳಿಕ ಎಂಬುದು ವಿಶೇಷ. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಪಂದ್ಯದಲ್ಲಿ 159 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 1 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ ಒಟ್ಟು 101 ರನ್ ಬಾರಿಸಿದ್ದಾರೆ. ಈ ಮೂಲಕ ಹೆಡಿಂಗ್ಲೆ ಮೈದಾನದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆಯಿದ್ದದ್ದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಫಾರೂಖ್ ಇಂಜಿನಿಯರ್ ಹೆಸರಿನಲ್ಲಿ. 1967 ರಲ್ಲಿ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಫಾರೂಖ್ ಇಂಜಿನಿಯರ್ 87 ರನ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಹೆಡಿಂಗ್ಲೆ ಮೈದಾನದಲ್ಲಿ ಮೂರಂಕಿ ರನ್ಗಳಿಸಿದ ಭಾರತದ ಮೊದಲ ಆರಂಭಿಕ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಮೈದಾನದಲ್ಲಿ ಸೆಂಚುರಿ ಬಾರಿಸಿದ ಟೀಮ್ ಇಂಡಿಯಾ 7ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದರಲ್ಲೂ 2002 ರಲ್ಲಿ ಈ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ ಬಳಿಕ ಭಾರತದ ಯಾವುದೇ ಬ್ಯಾಟರ್ ಲೀಡ್ಸ್ನಲ್ಲಿ ಮೂರಂಕಿ ರನ್ಗಳ ಗಡಿದಾಟಿರಲಿಲ್ಲ.

ಇದೀಗ ಫಾರೂಖ್ ಇಂಜಿನಿಯರ್ ಅವರ 58 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ (127) ಹಾಗೂ ರಿಷಭ್ ಪಂತ್ (65) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.