IND vs ENG: ೨೩ ವರ್ಷಗಳ ಬಳಿಕ ಇತಿಹಾಸ ಪುನರಾವರ್ತಿಸಿದ ಕನ್ನಡಿಗರು
India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ದೊರೆತಿದೆ. ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಶತಕ ಸಿಡಿಸಿದ್ದು, ಸೆಂಚುರಿಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದಲ್ಲಿ 359 ರನ್ ಕಲೆಹಾಕಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಶುರುವಾಗಿದೆ. ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದಾರೆ. ಇದರೊಂದಿಗೆ 23 ವರ್ಷಗಳ ಹಳೆಯ ಇತಿಹಾಸವೊಂದು ಪುನರಾವರ್ತನೆಯಾದಂತಾಗಿದೆ.
1 / 5
ಅಂದರೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದು, ಈ ಮೂಲಕ 2 ದಶಕಗಳ ಬಳಿಕ ಕರುನಾಡ ತ್ರಿಮೂರ್ತಿಗಳು ಟೀಮ್ ಇಂಡಿಯಾ ಪರ ಜೊತೆಯಾಗಿ ಕಣಕ್ಕಿಳಿದಂತಾಗಿದೆ.
2 / 5
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದದ್ದು 2002ರಲ್ಲಿ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಜೊತೆಯಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕರ್ನಾಟಕದ ಮೂವರು ಆಟಗಾರರು ಭಾರತದ ಪರ ಒಟ್ಟಿಗೆ ಟೆಸ್ಟ್ ಪಂದ್ಯವಾಡಿರಲಿಲ್ಲ.
3 / 5
ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಟೆಸ್ಟ್ ತಂಡದಲ್ಲಿ ಕರುನಾಡ ಕಲಿಗಳು ಮತ್ತೆ ಛಾಪು ಮೂಡಿಸಲು ಹೊರಟಿದ್ದಾರೆ.
4 / 5
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ (42) ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದಾರೆ. ಈ ಭರ್ಜರಿ ಆರಂಭದೊಂದಿಗೆ ಯಶಸ್ವಿ ಜೈಸ್ವಾಲ್ 159 ಎಸೆತಗಳಲ್ಲಿ 101 ರನ್ ಬಾರಿಸಿ ಮಿಂಚಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ ಮನ್ (127) ಅಜೇಯ ಶತಕ ಸಿಡಿಸಿದ್ದು, ರಿಷಭ್ ಪಂತ್ (65) ಅಜೇಯ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು 359 ರನ್ ಪೇರಿಸಿದ್ದಾರೆ.