
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 7ನೇ ಬಾರಿ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ ಅನ್ನೋ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಮಲ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ.

ನಿರೀಕ್ಷೆಯಂತೆ ಶೆಟ್ಟರ್‌ಗೆ ಗಾಳ ಹಾಕಿ ಕಾದು ಕುಳಿತ್ತಿದ್ದ ಕೈ ನಾಯಕರು ಫುಲ್ ಅಲರ್ಟ್ ಆಗಿದ್ರು. ಕಾಂಗ್ರೆಸ್‌ನ ಪ್ರಭಾವಿ ವೀರಶೈವ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪರನ್ನೇ ಮುಂದೆ ಬಿಟ್ಟಿದ್ರು. ಬೆಂಗಳೂರಿನ ರಿಚ್ಮಂಡ್ಟೌನ್ನಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಸ್ಕೈಗಾರ್ಡನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್‌ನಲ್ಲಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಉಪಸ್ಥಿತಿಯಲ್ಲಿ ನಿನ್ನೆ ರಾತ್ರಿ ಇಡೀ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಸುದೀರ್ಘ ಐದು ಗಂಟೆಗಳ ಕಾಲ ರಹಸ್ಯ ಚರ್ಚೆ ನಡೆಯಿತು,

ತಮ್ಮ ಆಪ್ತರಿಗೆ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ನಾಯಕರ ಮುಂದೆ ಜಗದೀಶ್ ಶೆಟ್ಟರ್ ಬೇಡಿಕೆ ಇಟ್ಟಿದ್ದಾರೆ. ತಮಗೆ ಹಾಗೂ ತಮ್ಮ ಆಪ್ತರಾದ ಮಾಜಿ ಶಾಸಕ SI ಚಿಕ್ಕನಗೌಡರ್ ತಮ್ಮ ತವನಪ್ಪ ಅಷ್ಟಗಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಲಕ್ಷ್ಮಣ ಸವದಿ ನಂತರ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಬಲ ತಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಶೆಟ್ಟರ್, ಸವದಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಮತಗಳ ಸೆಳೆಯಲು ತಂತ್ರಗಾರಿಕೆ ಹೆಣೆದಿದೆ.

ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.


ರಾಜ್ಯಪಾಲ ಹುದ್ದೆ ಕೊಡ್ತೇವೆ. ಕೇಂದ್ರದಲ್ಲಿ ಉನ್ನತ ಸ್ಥಾನಮಾನ ನೀಡ್ತೇವೆ. ಕುಟುಂಬಸ್ಥರಿಗೆ ಟಿಕೆಟ್ ಕೊಡ್ತೇವೆ ಎಂಬ ಬಿಜೆಪಿ ವರಿಷ್ಠರ ಭರವಸೆಗಳಿಗೆ ಸೊಪ್ಪು ಹಾಕದ ಶೆಟ್ಟರ್,

ಮೊನ್ನೆ ರಾತ್ರಿಯೇ ಬಿಜೆಪಿ ತೊರೆಯೋದಾಗಿ ಘೋಷಿಸಿದ್ರು. ನಿನ್ನೆ ಶಿರಸಿಯಲ್ಲಿ ಸ್ಪೀಕರ್ ಕಾಗೇರಿಯನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಪತ್ರ ರವಾನಿಸಿದ್ರು
Published On - 7:16 am, Mon, 17 April 23