Updated on: Feb 10, 2023 | 7:49 AM
ತೂಕ ಹೆಚ್ಚಾಗುವ ಸಮಸ್ಯೆ ಒಬ್ಬಿಬ್ಬರದಲ್ಲ. ತೂಕ ಹೆಚ್ಚಾಗಲು ನಮ್ಮ ಜೀವನಶೈಲಿ, ಆಹಾರ ಕ್ರಮವೂ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಆಹಾರವನ್ನು ನೋಡಿದಾಗ ನಮಗೆ ಅದನ್ನು ತಿನ್ನಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ಕಡುಬಯಕೆಗಳು ನಮ್ಮ ತೂಕವನ್ನು ಹೆಚ್ಚಿಸುತ್ತದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಹೈಪೋಥಾಲಮಸ್ ಅನ್ನು ಉತ್ತೇಜಿಸುತ್ತದೆ. ಯಾವಾಗಲೋ ಆಗೀಗ ಈ ರೀತಿಯ ಜಂಕ್ಫುಡ್ಗಳನ್ನು ತಿನ್ನುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಆಗಾಗ ಈ ರೀತಿಯ ಆಹಾರವನ್ನು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.
ಬಿಳಿ ಪಾಸ್ತಾ: ಸಂಸ್ಕರಿಸಿದ ಹಿಟ್ಟು, ಬ್ರೆಡ್‌ಗಳು ಮತ್ತು ಪಾಸ್ತಾದಂತಹ ಎಲ್ಲಾ ರೀತಿಯ ಸರಳ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ, ಕ್ರಮೇಣ ತೂಕ ಹೆಚ್ಚಾಗುತ್ತದೆ.
ಕ್ಯಾಂಡಿ: ಚಾಕೊಲೇಟ್‌ಗಳು, ಸಿಹಿತಿಂಡಿಗಳು ಮತ್ತು ಕ್ಯಾಂಡಿಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಅವುಗಳಲ್ಲಿರುವ ಸಕ್ಕರೆ ಅಂಶ ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಅವು ಫ್ರಕ್ಟೋಸ್ ಸಿರಪ್, ಕಾರ್ನ್ ಸಿರಪ್ಗಳಿಂದ ತುಂಬಿರುತ್ತವೆ. ಇದು ದೇಹವು ಸಾಕಷ್ಟು ಮಟ್ಟದ ಲೆಪ್ಟಿನ್ ಅನ್ನು ಉತ್ಪಾದಿಸುವುದನ್ನು ತಡೆಯುತ್ತದೆ.
ಫ್ರೆಂಚ್ ಫ್ರೈಸ್: ಬಹುತೇಕರ ಫೇವರೆಟ್ ತಿಂಡಿಗಳಲ್ಲಿ ಫ್ರೆಂಚ್ ಫ್ರೈಸ್ ಕೂಡ ಒಂದು. ಕೇವಲ ಆಲೂಗಡ್ಡೆ, ಎಣ್ಣೆ ಮತ್ತು ಉಪ್ಪು ಹಾಕಿ ತಯಾರಿಸಲಾಗುವ ಈ ತಿನಿಸು ನಮ್ಮ ಕಡುಬಯಕೆಯನ್ನು ಹೆಚ್ಚಿಸುತ್ತದೆ. ಆಲೂಗಡ್ಡೆ ಮತ್ತು ಎಣ್ಣೆಯ ಅಂಶ ಎರಡೂ ಸೇರುವುದರಿಂದ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಚಿಪ್ಸ್ : ಆಲೂಗಡ್ಡೆ ಮತ್ತು ಚೀಸ್‌ನಿಂದ ತಯಾರಿಸಿದ ಚಿಪ್ಸ್ ಮತ್ತು ಕ್ರ್ಯಾಕರ್‌ಗಳು ಕೂಡ ತೂಕವನ್ನು ಹೆಚ್ಚಿಸುತ್ತವೆ. ಇವನ್ನು ಒಮ್ಮೆ ತಿನ್ನಲು ಆರಂಭಿಸಿದರೆ ಆ ಪ್ಯಾಕ್ ಖಾಲಿ ಆಗುವವರೆಗೆ ಸುಮ್ಮನಿರಲು ಸಾಧ್ಯವೇ ಇಲ್ಲ.
ಐಸ್ ಕ್ರೀಮ್: ಕೆಲವರಿಗೆ ಐಸ್ ಕ್ರೀಮ್ ಎಷ್ಟು ಇಷ್ಟವೆಂದರೆ ಒಂದು ಬಕೆಟ್ ಐಸ್ಕ್ರೀಂ ಕೊಟ್ಟರೂ ತಿಂದು ಮುಗಿಸುತ್ತಾರೆ. ಐಸ್ ಕ್ರೀಮ್‌ಗಳು ಕೊಬ್ಬುಗಳು, ಸಕ್ಕರೆ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತವೆ. ಇದು ಬೊಜ್ಜನ್ನು ಹೆಚ್ಚಿಸುತ್ತದೆ.