
ಜನವರಿ 13 ರಿಂದ ಒಡಿಶಾದಲ್ಲಿ ಪ್ರಾರಂಭವಾಗುವ ಪುರುಷರ ಹಾಕಿ ವಿಶ್ವಕಪ್‌ಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಈಗ ಆಕ್ಷನ್ ಪ್ರಾರಂಭವಾಗಲು ಕಾಯಲಾಗುತ್ತಿದೆ. ಬಹುದಿನಗಳಿಂದ ಪ್ರಶಸ್ತಿಗಾಗಿ ಕಾಯುತ್ತಿದ್ದ ಭಾರತ ತಂಡ ಈ ಬಾರಿ ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾರಿ ಮೊತ್ತದ ಬಹುಮಾನ ಘೋಷಿಸುವ ಮೂಲಕ ಭಾರತ ತಂಡವನ್ನು ಹುರಿದುಂಬಿಸಿದ್ದಾರೆ.

ಗುರುವಾರ, ಜನವರಿ 5 ರಂದು, ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್ ಅವರು ಹಾಕಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ರೂಪಾಯಿಗಳ ಬಹುಮಾನವನ್ನು ನೀಡುವುದಾಗಿ ಘೋಷಣೆ ಹೊರಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಟ್ನಾಯಕ್, “ನಮ್ಮ ದೇಶ ವಿಶ್ವಕಪ್ ಗೆದ್ದರೆ, ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದಿದ್ದಾರೆ. ಹಾಗೆಯೇ ಟೀಮ್ ಇಂಡಿಯಾಗೆ ಶುಭ ಹಾರೈಸಿರುವ ಸಿಎಂ, ನಮ್ಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ರೂರ್ಕೆಲಾಗೆ ಭೇಟಿ ನೀಡಿದ ಪಟ್ನಾಯಕ್ ಅವರು ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ ಸಂಕೀರ್ಣದಲ್ಲಿ 'ವಿಶ್ವಕಪ್ ವಿಲೇಜ್' ಅನ್ನು ಉದ್ಘಾಟಿಸಿದರು. ಕೇವಲ ಒಂಬತ್ತು ತಿಂಗಳಲ್ಲಿ ವಿಶ್ವಕಪ್ ಗ್ರಾಮವನ್ನು ನಿರ್ಮಿಸಲಾಗಿದ್ದು, ಇದು ಹಾಕಿ ವಿಶ್ವಕಪ್‌ನ ಮಟ್ಟಕ್ಕೆ ಅನುಗುಣವಾಗಿ ಎಲ್ಲಾ ಸೌಲಭ್ಯಗಳೊಂದಿಗೆ 225 ಕೊಠಡಿಗಳನ್ನು ಹೊಂದಿದೆ. ಮುಂಬರುವ ಹಾಕಿ ವಿಶ್ವಕಪ್ ತಂಡಗಳು ಮತ್ತು ಅಧಿಕಾರಿಗಳು ವಿಶ್ವಕಪ್ ವಿಲೇಜ್‌ನಲ್ಲಿ ತಂಗಲಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಪಟ್ನಾಯಕ್ ಅವರು ಭಾರತ ತಂಡದ ಆಟಗಾರರನ್ನು ಭೇಟಿಯಾಗಿ ವಿಶ್ವಕಪ್‌ಗೆ ಶುಭ ಹಾರೈಸಿದರು.
Published On - 10:45 am, Fri, 6 January 23