ಇಂದು (ಸೋಮವಾರ) ಬೆಳಗ್ಗೆ ಬೆಂಗಳೂರಿನಾದ್ಯಂತ ಭಾರಿ ಸಂಚಾರ ದಟ್ಟಣೆ ಕಂಡುಬಂದಿದೆ. ವಾಹನಗಳ ವಿಪರೀತ ಒಳಹರಿವಿನಿಂದ ಈ ದಟ್ಟಣೆ ಉಂಟಾಗಿದೆ ಎಂದು ಬೆಂಗಳೂರಿನ ಜಂಟಿ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.
ಬೆಂಗಳೂರಿನ ತುಮಕೂರು ರಸ್ತೆ, ಮಾದಾವರದಿಂದ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದವರೆಗೆ ನಿರಂತರ ಟ್ರಾಫಿಕ್ ಜಾಮ್ ಉಂಟಾಯಿತು. ಇದು ಔಟರ್ ರಿಂಗ್ರಸ್ತೆಯ ಎರಡೂ ಪಥಗಳ ಮೇಲೆ ಪರಿಣಾಮ ಬೀರಿತು. ಹೆಬ್ಬಾಳ ಕಡೆಗೆ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ದಟ್ಟಣೆ ವಿಸ್ತರಿಸಿತ್ತು. ಗೊರಗುಂಟೆಪಾಳ್ಯ ಕಡೆಗೆ ಸಾಗುವ ಪೀಣ್ಯ ಮೇಲ್ಸೇತುವೆಯಲ್ಲಿ ಸರಕು ಸಾಗಣೆ ವಾಹನ ಕೆಟ್ಟು ನಿಂತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತು.
ಹೆಬ್ಬಾಳ ಜಂಕ್ಷನ್‌ನ ಮೂರು ಭಾಗಗಳು ಸೋಮವಾರ ಬೆಳಿಗ್ಗೆ ನಿಧಾನಗತಿಯ ಚಾಲನೆಯಿಂದ ವಾಹನ ಸವಾರರನ್ನು ಉಸಿರುಗಟ್ಟುವಂತೆ ಮಾಡಿತು. ವಿಶೇಷವಾಗಿ ವಿಮಾನ ನಿಲ್ದಾಣದಿಂದ ನಗರಕ್ಕೆ ಒಳಬರುವ ಮಾರ್ಗದಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು.
ಮಾರತ್ತಹಳ್ಳಿ ಮತ್ತು ಇಬ್ಲೂರು ಜಂಕ್ಷನ್‌ಗಳಲ್ಲಿ ಬೆಳಗಿನ ಪೀಕ್ ಅವರ್ನಲ್ಲಿ ವಾಹನಗಳು ತೆವಳುತ್ತಾ ಸಾಗಿದವು. ಅದೇ ರೀತಿ ಮೈಸೂರು ರಸ್ತೆಯ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೆಟ್ರೊ ನಿಲ್ದಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದ ನಡುವೆ ವಾಹನಗಳ ನಿಧಾನ ಸಂಚಾರ ಕಂಡು ಬಂತು.
ಮಳೆ ಸುರಿದಿದ್ದು, ಟ್ರಾಫಿಕ್ ಜಾಮ್ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಬೆಳಿಗ್ಗೆ 8.30 ರ ಹೊತ್ತಿಗೆ ಬೆಂಗಳೂರು ನಗರ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 3.3 ಮಿಮೀ ಮತ್ತು 3.0 ಮಿಮೀ ಮಳೆ ದಾಖಲಾಗಿದೆ.