
ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ, ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದಲ್ಲಿ ಕಂಡು ಬರೋ ದೃಶ್ಯವಲ್ಲ. ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರುವುದು ನಮ್ಮ ಮಡಿಕೇರಿಯಲ್ಲಿ.

ಹೌದು,ಮಡಿಕೇರಿ ನಗರದಿಂದ 5 ಕಿಲೋ ಮೀಟರ್ ದೂರದ ನಂದಿಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್ ತಲೆ ಎತ್ತಿದೆ. ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ ರೆಸ್ತೆಯಲ್ಲೇ ಈ ಸ್ಕೈ ಬ್ರಿಡ್ಜ್ ಇದೆ.

ಈ ಗ್ರಾಮದ ಭೀಮಯ್ಯ ಎಂಬುವವರು ಕಳೆದ 8 ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ನ್ನು ನಿರ್ಮಿಸಿದ್ದಾರೆ. ಇದಕ್ಕೆ 33 ಎಂಎಂ ದಪ್ಪದ ಗ್ಲಾಸ್ ಅನ್ನ ಮೂರು ಲೇಯರ್ನಲ್ಲಿ ಬಳಸಲಾಗಿದ್ದು ಒಟ್ಟು 80 ಅಡಿ ಉದ್ದವಿದ್ದು 250 ಅಡಿ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್ ಆಗಿ ಹೊರಹೊಮ್ಮಿದೆ.

ಕಳೆದ ಭಾನುವಾರ ಈ ಸೇತುವೆ ಲೋಕಾರ್ಪಣಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವೀವ್ ಪಾಯಿಂಟ್ಗೆ ತಲುಪಿದ ಮೇಲೆ ಕೆಳಗಡೆ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

ಈ ವೀವ್ ಪಾಯಿಂಟ್ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸಂದರ್ಯ ಕಾಣಿಸಿದ್ರೆ, ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ. ಒಮ್ಮೆಗೆ ಕೇವಲ 10 ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು, ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

ಕೊಡಗಿನಲ್ಲಿ ವಿಶ್ದರ್ಜೆಯ ಸಾಹಸ ಪ್ರವಾಸೋಧ್ಯಮ ಬೇಕು ಎಂದು ಬಯಸುವವರಿಗೆ ಈ ಸ್ಕೈ ಬ್ರಿಡ್ಜ್ ಸಖತ್ ಥ್ರಿಲ್ ನೀಡಲಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋಧ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ,
Published On - 4:21 pm, Wed, 1 May 24