ಇತ್ತೀಚೆಗಷ್ಟೇ ಭಾರತದ ಮೊತ್ತಮೊದಲ ಇ-ಟಿಪ್ಪರ್ ತಯಾರಿಸಿ ಪ್ರಾಧಿಕಾರದ ಅನುಮೋದನೆ ಪಡೆದ ಒಲೆಕ್ಟ್ರಾ ಗ್ರೀನ್ಟೆಕ್ ಸಂಸ್ಥೆ (Olectra Greentech Ltd) ಇದೀಗ ತೆಲಂಗಾಣ ಸಾರಿಗೆ ಸಂಸ್ಥೆಗೆ 550 ಎಲೆಕ್ಟ್ರಿಕ್ ಬಸ್ಸುಗಳನ್ನು (Electric Buses) ಪೂರೈಸಲು ಆರ್ಡರ್ ಪಡೆದಿದೆ. ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ (ಎಂಇಐಎಲ್) ಸಂಸ್ಥೆ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಗೆ (TSRTC) 550 ಇ-ಬಸ್ಸುಗಳನ್ನು ತಯಾರಿಸಿ ಕೊಡಲಿದೆ. ದಕ್ಷಿಣ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸರಬರಾಜಿಗೆ ಈ ಕಂಪನಿಗೆ ಸಿಕ್ಕಿರುವ ಅತಿದೊಡ್ಡ ಆರ್ಡರ್ ಇದಾಗಿದೆ.
ಇದರಲ್ಲಿ ಸ್ಟಾಂಡರ್ಡ್ ಫ್ಲೋರ್ 12 ಮೀಟರ್ ಇಂಟರ್ಸಿಟಿ ಕೋಚ್ನ 50 ಇ-ಬಸ್ಸುಗಳಿವೆ. ಲೋ ಫ್ಲೋರ್ 12-ಮೀಟರ್ ಇಂಟ್ರಾಸಿಟಿ ಕೋಚ್ನ 500 ಇ-ಬಸ್ಸುಗಳನ್ನು ಒಲೆಕ್ಟ್ರಾ ತಯಾರಿಸಿಕೊಡಲಿದೆ. ಹೈದರಾಬಾದ್ ನಗರ ಹಾಗೂ ತೆಲಂಗಾಣದ ವಿವಿಧ ಕಡೆ ಈ ಬಸ್ಸುಗಳನ್ನು ಕಾರ್ಯಾಚರಿಸಲು ಟಿಎಸ್ಆರ್ಟಿಸಿ ಉದ್ದೇಶಿಸಿದೆ.
ಒಲೆಕ್ಟ್ರಾ ಗ್ರೀನ್ಟೆಕ್ನ ಛೇರ್ಮನ್ ಕೆ.ವಿ. ಪ್ರದೀಪ್ ಈ ಬಗ್ಗೆ ಮಾತನಾಡಿ, 550 ಎಲೆಕ್ಟ್ರಿಕ್ ಬಸ್ಸುಗಳನ್ನು ಹಂತ ಹಂತವಾಗಿ ಸರಬರಾಜು ಮಾಡಲಾಗುವುದು. ಇವು ಶುದ್ಧ ಎಲೆಕ್ಟ್ರಿಕ್ ಬಸ್ಸುಗಳಾಗಿದ್ದು ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದಿಂದ ಮುಕ್ತವಾಗಿರುತ್ತವೆ ಎಂದು ಹೇಳಿದ್ದಾರೆ.
ಟಿಎಸ್ಆರ್ಟಿಸಿಗೆ ಒಲೆಕ್ಟ್ರಾ 2019ರಲ್ಲಿ 40 ಎಲೆಕ್ಟ್ರಿಕ್ ಬಸ್ಸುಗಳನ್ನು ಒದಗಿಸಿತ್ತು. ಈ ಬಸ್ಸುಗಳು ಹೈದರಾಬಾದ್ ಏರ್ಪೋರ್ಟ್ನಿಂದ ನಗರದ ವಿವಿಧೆಡೆಗೆ ಸಂಚರಿಸುತ್ತಿವೆ. ಈಗ ಇನ್ನಷ್ಟು 550 ಒಲೆಕ್ಟ್ರಾ ಇ-ಬಸ್ಸುಗಳು ಹೈದರಾಬಾದ್ ರಸ್ತೆಗೆ ಇಳಿಯುವ ಸಮಯ ಬಂದಿದೆ.
ಈ ವರ್ಷ ಆರ್ಡರ್ ಕೊಡಲಾಗಿರುವ 550 ಇ-ಬಸ್ಸುಗಳ ಪೈಕಿ 500 ಬಸ್ಸುಗಳು ಹೈದರಾಬಾದ್ ನಗರದೊಳಗೆ ಸಂಚರಿಸಲು ಉದ್ದೇಶಿಸಿವೆ. ಇವು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 225 ಕಿಮೀ ದೂರ ಸಂಚರಿಸಬಹುದು. ಹಾಗೆಯೇ, 50 ಇಂಟರ್ಸಿಟಿ ಇ-ಬಸ್ಸುಗಳು ಹೈದರಾಬಾದ್ನಿಂದ ವಿಜಯವಾಡ ಮಧ್ಯೆ ಓಡಾಟ ಮಾಡಲಿವೆ.
ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ಸುಗಳ ನಿರ್ವಹಣೆಗೆ ಟಿಎಸ್ಆರ್ಟಿಸಿ ಸಂಸ್ಥೆ ಹೈದರಾಬಾದ್ನಲ್ಲಿ ಐದು ಡಿಪೋಗಳನ್ನು ನಿಯೋಜಿಸಿದೆ. ಒಲೆಕ್ಟ್ರಾ ಇ-ಬಸ್ಸುಗಳ ನಿರ್ವಹಣಾ ವೆಚ್ಚ ಕಡಿಮೆ ಆಗಿರುವುದರಿಂದ ತೆಲಂಗಾಣ ಸಾರಿಗೆ ಸಂಸ್ಥೆಗೆ ಲಾಭದಾಯಕ ಆಗುವ ನಿರೀಕ್ಷೆ ಇದೆ.
ಟಿಎಸ್ಆರ್ಟಿಸಿ ಸಂಸ್ಥೆ ಮುಂದಿನ ಎರಡು ವರ್ಷದಲ್ಲಿ 3,400 ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸುವ ಯೋಜನೆ ಹೊಂದಿದೆ. ಇದರ ಮೊದಲ ಹಂತವಾಗಿ ಒಲೆಕ್ಟ್ರಾದಿಂದ 550 ಇ-ಬಸ್ಸುಗಳಿಗೆ ಆರ್ಡರ್ ಕೊಡಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿ ಸಜ್ಜನಾರ್ ಅವರು ಹೇಳಿದ್ದಾರೆ.
ಟಿಎಸ್ಆರ್ಟಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಇ-ಬಸ್ಸುಗಳನ್ನು ಖರೀದಿಸಲು ಉದ್ದೇಶಿಸಿರುವುದರಿಂದ ಒಲೆಕ್ಟ್ರಾ ಕಂಪನಿ ಇನ್ನಷ್ಟು ಆರ್ಡರ್ ಪಡೆಯುವ ನಿರೀಕ್ಷೆಯಲ್ಲಿದೆ.